ಕನ್ನಡದಲ್ಲಿ ಯೋಗರಾಜ್ ಭಟ್ ಹಾಗೂ ಸೂರಿ ತಮ್ಮ ತಮ್ಮ ಚಿತ್ರದ ಯಶಸ್ಸಿನಿಂದ ಚಿತ್ರರಂಗದಲ್ಲಿ ಬಹುಬೇಡಿಕೆಯನ್ನು ಪಡೆದವರು. ದುನಿಯಾ ಚಿತ್ರವನ್ನು ನೋಡಿದ ಪ್ರೇಕ್ಷಕರು ಸೂರಿಯ ಕ್ರಿಯೇಟಿವ್ ನಿರ್ದೇಶನವನ್ನು ಕೊಂಡಾಡಿದರು. ನಂತರ ಸೂರಿ ಮತ್ತೊಂದು ಚಿತ್ರವನ್ನು ನಿರ್ದೇಶಿಸುತ್ತಾರೆಂಬ ಸುದ್ದಿ ಕೇಳಿದಾಗ ಸಹಜವಾಗಿಯೇ ಪ್ರೇಕ್ಷಕರಿಗೆ ಆ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿತ್ತು. ಹಿಂದೆ ಒಂದು ಹಿಟ್ ಚಿತ್ರವನ್ನು ನೀಡಿದ ನಿರ್ದೇಶಕ ಈ ಸಲ ಯಾವ ರೀತಿಯ ಚಿತ್ರವನ್ನು ನೀಡಿದ್ದಾರೆ ಎಂದು ಜನ ಚಿತ್ರಮಂದಿರಕ್ಕೆ ಹೋದರೆ ಅಲ್ಲಿ ನಿರಾಶೆ ಕಾದಿತ್ತು.
ಹೌದು, ಸೂರಿ ನಿರ್ದೇಶಿಸಿದ ಇಂತಿ ನಿನ್ನ ಪ್ರೀತಿಯ ಚಿತ್ರವನ್ನು ನೋಡಿದ ಜನತೆ "ಯಾಕಾಗಿ ಸೂರಿ ಈ ರೀತಿಯ ಚಿತ್ರವನ್ನು ನೀಡಿದ್ದಾರೆ" ಎಂದು ತಲೆ ಮೇಲೆ ಕೈಇಟ್ಟುಕೊಂಡರು. ಈ ಚಿತ್ರದಲ್ಲಿನ ಹೊಸ ಪ್ರಯೋಗ ಜನತೆಗೆ ಹಿಡಿಸಲಿಲ್ಲ. ಚಿತ್ರದಲ್ಲಿ ಕುಡಿತವನ್ನು ಬಿಟ್ಟರೆ ಬೇರೇನೂ ಇಲ್ಲ ಎಂದು ಆಡಿಕೊಂಡರು.
ಈಗ ಸೂರಿ ಇವೆಲ್ಲದಕ್ಕೂ ಉತ್ತರ ಕಂಡುಕೊಂಡು ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಅವರ ಪ್ರಕಾರ ಚಿತ್ರದಲ್ಲಿನ ಹೊಸ ಪ್ರಯೋಗ ಜನತೆಗೆ ಇಷ್ಟವಾಗಲಿಲ್ಲ. "ನಾನು ಈಗಿನ ಕಾಲಕ್ಕಿಂತ ಎರಡು ವರ್ಷ ಮುಂದೆ ಹೋಗಿ ಈ ಚಿತ್ರ ನಿರ್ಮಿಸಿದ್ದೇನೆ ಅಥವಾ ಎರಡು ವರ್ಷ ಹಿಂದೆ ಬಂದು ಚಿತ್ರ ನಿರ್ಮಿಸಿದ್ದೇನೆ. ಆದ್ದರಿಂದ ಚಿತ್ರ ಗೆಲ್ಲಲಿಲ್ಲ. ಹೌದು ನಿಜಕ್ಕೂ ಇದು ನನ್ನ ಕನಸಿನ ಕೂಸು. ಆದರೆ ಇದು ಹುಟ್ಟುವಾಗಲೇ ಕ್ಯಾನ್ಸರ್ ರೋಗಕ್ಕೆ ತುತ್ತಾಯಿತು" ಎನ್ನುತ್ತಾರೆ ಸೂರಿ. "ಚಿತ್ರಗಳಲ್ಲಿ ಫೈಟ್ಗಳಿಗೆ ಕಡಿಮೆ ಅವಕಾಶವಿದ್ದದ್ದು ಕೂಡಾ ಸೋಲಿಗೆ ಕಾರಣವೆನಿಸುತ್ತದೆ. ಆದರೆ ಫೈಟ್‌ಗಳಿದ್ದ ಚಿತ್ರಗಳು ಕೂಡಾ ಗೆಲ್ಲಲಿಲ್ಲ. ಈ ಚಿತ್ರದ ಬಗೆಗಿನ ನನ್ನ ಭ್ರಮೆ ಈಗ ನನ್ನ ಕಣ್ಣು ತೆರೆಸಿತು. ಸೋಲನ್ನು ಅರ್ಥ ಮಾಡಿಕೊಂಡಿದ್ದೇನೆ. ನನ್ನ ಚಿತ್ರದ ಬಗ್ಗೆ ನೀರೀಕ್ಷೆ ಇಟ್ಟ ಮಂದಿಗೆ ಯಾವತ್ತೂ ನಾನು ಮೋಸ ಮಾಡುವುದಿಲ್ಲ" ಎಂದು ಭರವಸೆ ನೀಡಿದ್ದಾರೆ.
ಈಗ ರಾಕ್ಲೈನ್ ನಿರ್ಮಾಣದ ವಿಜಯ್ ನಾಯಕನಾಗಿ ನಟಿಸುತ್ತಿರುವ ಚಿತ್ರವನ್ನು ನಿರ್ದೇಶಿಸಲು ಸೂರಿ ಮುಂದಾಗಿದ್ದಾರೆ. ಈ ಚಿತ್ರ ಇನ್ನು ಎರಡು ತಿಂಗಳಲ್ಲಿ ಶುರುವಾಗುತ್ತದೆ ಎನ್ನುತ್ತಾರೆ ಸೂರಿ. ಈ ಚಿತ್ರದಲ್ಲಾದರೂ ಸೂರಿ ತಮ್ಮ ಹಿಂದಿನ ಯಶಸ್ಸು ಕಂಡುಕೊಳ್ಳಲಿ. ಗುಡ್ಲಕ್ ಸೂರಿ.
|