ಭಾರೀ ಪ್ರಚಾರದೊಂದಿಗೆ ಮುಹೂರ್ತ ಕಂಡ ಚಿತ್ರಗಳು ನಂತರದ ದಿನಗಳಲ್ಲಿ ಎಲ್ಲಿ ಹೋಗುತ್ತವೆ ಎಂಬುದೇ ಕೆಲವೊಮ್ಮೆ ಗೊತ್ತಾಗುವುದಿಲ್ಲ. ಕೆಲವು ಚಿತ್ರಗಳ ಚಿತ್ರೀಕರಣ ಅರ್ಧದಲ್ಲೆ ನಿಂತರೆ ಇನ್ನೂ ಕೆಲವು ಚಿತ್ರಗಳು ನಿಧಾನಗತಿಯಲ್ಲಿ ಸಾಗಿ ಅನಿರೀಕ್ಷಿತವಾಗಿ ಬಿಡುಗಡೆಗೆ ಸಿದ್ಧವಾಗುತ್ತವೆ. ಅಂತಹುದೇ ಕೆಲವು ಕಲಾತ್ಮಕ ಚಿತ್ರಗಳು ಈಗ ಬಿಡುಗಡೆಗೆ ಸಿದ್ಧವಾಗಿವೆ.
ರಾಮದಾಸ್ ನಾಯ್ಡು ನಿರ್ದೇಶನದ ಮೊಗ್ಗಿನ ಜಡೆ ಚಿತ್ರ ಇನ್ನೊಂದು ಎರಡು ವಾರಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದಲ್ಲಿ ಪವಿತ್ರಾ ಲೋಕೇಶ್, ಬೇಬಿ ಶ್ರೀಷಾ ನಟಿಸಿದ್ದಾರೆ. ಚಿತ್ರ ಈಗಾಗಲೇ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿದೆ. ಈಗ ಪಿ.ವಿ.ಆರ್ ಸೇರಿದಂತೆ ಇನ್ನೊಂದೆರಡು ಚಿತ್ರಮಂದಿರಗಳಲ್ಲಿ ಮೊಗ್ಗು ಅರಳಲು ಸಿದ್ಧತೆ ನಡೆಸುತ್ತಿದ್ದಾರೆ ನಾಯ್ಡು.
ಮೇ ಒಂದರಂದು ಸುಂದರ್ರಾಜ್ ನಿರ್ಮಾಣದ, ಬರಗೂರು ರಾಮಚಂದ್ರಪ್ಪ ನಿರ್ದೇಶನದ ತಾಯಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈ ಚಿತ್ರ ಕೂಡಾ ರಾಜ್ಯ ಹಾಗೂ ರಾಷ್ಟ್ತ್ರ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಗೀರೀಶ್ ಕಾಸರವಳ್ಳಿ ನಿರ್ದೇಶನದ ಗುಲಾಬಿ ಟಾಕೀಸ್, ಬಿ. ಸುರೇಶ್ ನಿರ್ಮಾಣದ ಗುಬ್ಬಚ್ಚಿಗಳು ಚಿತ್ರ ಕೂಡಾ ಬಿಡುಗಡೆಗೆ ಸಿದ್ಧವಾಗಿದೆ.
ಹಾಗಂತ ಯಾವಾಗ ಬಿಡುಗಡೆಯಾಗುತ್ತವೆಂಬ ಖಚಿತ ಮಾಹಿತಿ ಸಿಕ್ಕಿಲ್ಲ. ಸಿಕ್ಕಿದ ತಕ್ಷಣ ಖಂಡಿತಾ ತಿಳಿಸ್ತಿವಿ ಓಕೆ.
|