ಕನ್ನಡ ಚಿತ್ರರಂಗದಲ್ಲಿ ಪ್ರೀತಿ ಪ್ರೇಮ ಹಾಗೂ ಲಾಂಗು ಮಚ್ಚುಗಳ ಚಿತ್ರಗಳು ಸಾಕಷ್ಟಿವೆ. ಆದರೆ ಇವುಗಳು ಎಷ್ಟರ ಮಟ್ಟಿಗೆ ಗೆಲ್ಲುತ್ತವೆ ಎನ್ನುವುದು ಬೇರೆ ಮಾತು. ಈಗ ಇದೇ ರೀತಿಯ, ಪ್ರೀತಿ ಜೊತೆಗೆ ಲಾಂಗು ಇರುವ 'ಬಾಬಾಳ' ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.
ವರ್ಷದ ಹಿಂದೆ ಆರಂಭವಾದ ಈ ಚಿತ್ರ ಅದೇಕೋ ತೆರೆ ಕಾಣಲು ಮೀನಾ ಮೇಷ ಕಾಣುತಿತ್ತು. ಇನ್ನೇನು ಚಿತ್ರ ತೆರೆ ಕಾಣಲು ಸಿದ್ಧವಾಗಿದೆ. ಆದರೆ ಚಿತ್ರಮಂದಿರ ಸಮಸ್ಯೆ ಈ ಚಿತ್ರ ತೆರೆಕಾಣಲು ಅಡ್ಡಿಯಾಗುತ್ತಿದೆ. ಚಿತ್ರವನ್ನು ರಾಜಣ್ಣ ನಿರ್ಮಿಸಿದ್ದಾರೆ. ಎರಡೂ ವರ್ಷಗಳ ಹಿಂದೆ ಇವರು ನಿರ್ಮಿಸಿದ್ದ ಎರಡೂ ಚಿತ್ರಗಳು ಗೋತಾ ಹೊಡೆದಿದ್ದವು. ಆದರೆ ರಾಜಣ್ಣ ಈ ಚಿತ್ರದ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದಾರೆ.
ಓದುವ ವಯಸ್ಸಿನಲ್ಲಿ ಪ್ರೇಮದ ಹಿಂದೆ ಬೀಳುವವರ ಗತಿ ಏನಾಗುತ್ತದೆ ಎನ್ನುವ ಸಂದೇಶವನ್ನು ಚಿತ್ರ ಒಳಗೊಂಡಿದೆ. ಇನ್ನೂ ಹರೆಯದ ಹುಡುಗ ಕಾರ್ತಿಕ್ ನಾಯಕನಾಗಿ ಹಾಗೂ ಪ್ರಜ್ಞಾ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರವನ್ನು ತ್ರಿಶೂಲ್ ನಿರ್ದೇಶಿಸಿದ್ದಾರೆ. ಮಚ್ಚು ಹಿಡಿದಿರುವ ಬಾಬಾ ಚಿತ್ರದ ಪೋಸ್ಟರ್ ಎಲ್ಲೆಡೆ ರಾರಾಜಿಸುತ್ತಿದ್ದಂತೆ ಗಾಂಧಿನಗರದಲ್ಲಿ ಈ ಚಿತ್ರದ ಬಗ್ಗೆ ಸಹಜವಾಗಿ ಕುತೂಹಲ ಹೆಚ್ಚಿದೆ.
ಚಿತ್ರದಲ್ಲಿ ರಮೇಶ್ ಭಟ್, ಪದ್ಮಾ ವಾಸಂತಿ, ಪ್ರಕಾಶ್, ದಯಾನಂದ್, ರಮಣಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕವಾದರೂ ರಾಜಣ್ಣ ಗೆಲ್ಲುತ್ತಾರಾ ನೋಡಬೇಕು.
|