ಮಿಸ್ಟರ್ ಗರಗಸದ ಮೂಲಕ ಪೂರ್ಣಪ್ರಮಾಣದ ನಾಯಕನಾದ ಕೋಮಲ್ ಆ ಚಿತ್ರ ಬಿಡುಗಡೆಯಾದ ದಿನ ಬೆಳಗ್ಗೆ ತೀರಾ ಜ್ವರದಿಂದ ಹಾಸಿಗೆ ಹಿಡಿದಿದ್ದರಂತೆ. ಬೆಳಗ್ಗಿನ ಶೋಗೆ ಚಿತ್ರಮಂದಿರ ಜಾಸ್ತಿ ಪ್ರೇಕ್ಷಕರಿಲ್ಲದೇ ಭಣಗುಡತ್ತಿತ್ತು. ಇದರಿಂದ ಕೋಮಲ್ ಮಂಕಾಗಿದ್ದರು.
ಎಷ್ಟೋ ವರ್ಷಗಳಿಂದ ತಾನು ಪೂರ್ಣಪ್ರಮಾಣದ ನಾಯಕನಾಗಬೇಕೆಂಬ ಕನಸು ಕೊನೆಗೂ ಈಡೇರಿದೆ. ಆದರೆ ಮುಂದಕ್ಕೆ ಇದನ್ನು ಉಳಿಸಿಕೊಂಡು ಹೋಗಲು ಸಾಧ್ಯವಾಗದಿದ್ದರೆ ಎಂಬ ಚಿಂತೆಯಲ್ಲಿ ಕೋಮಲ್‌ಗೆ ಜ್ವರ ಬಂದಿದೆ. ಇವರ ಮಗಳು, ಪ್ರತಿ ಶೋಗೂ ಹೋಗಿಬಂದು, ಅಪ್ಪ ನೀನು ಗೆದ್ದೇ ಗೆಲ್ತಿಯಾ, ಹೆದರಬೇಡ ಎನ್ನುತ್ತಿದ್ದಳಂತೆ.
ಕೋಮಲ್ ಯಾವತ್ತಿಗೂ ತಮ್ಮ ಚಿತ್ರವನ್ನು ಪ್ರೇಕ್ಷಕರೊಟ್ಟಿಗೆ ಕುಳಿತು ಚಿತ್ರಮಂದಿರದಲ್ಲಿ ನೋಡಿಲ್ಲವಂತೆ. ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಭಯದಿಂದ ಹೋಗಿಲ್ಲ. ನನ್ನ ಸಿನಿಮಾದ ವಿಮರ್ಶಕಿ ನನ್ನ ಹೆಂಡತಿ. ನನ್ನ ಪ್ರತಿ ಸಿನಿಮಾಕ್ಕೂ ಆಕೆ ಹೋಗಿ ಜನರ ಪ್ರತಿಕ್ರಿಯೆ ಹೇಗಿತ್ತೆಂದು ನನಗೆ ತಿಳಿಸುತ್ತಾಳೆ ಎನ್ನುತ್ತಾರೆ ಕೋಮಲ್.
ಮಿಸ್ಟರ್ ಗರಗಸವನ್ನು ಜನ ಮೆಚ್ಚಿದ್ದಾರೆ. ನಕ್ಕು ನಲಿದಿದ್ದಾರೆ ಎಂದಾಗ ಕೋಮಲ್‌ಗೆ ಸಂತೋಷವಾಗಿದೆ. ಇವರ ಜ್ವರ ಬಿಡಿಸಲು ಅಣ್ಣ ಜಗ್ಗೇಶ್ ಎಷ್ಟೇ ಸಮಾಧಾನ ಹೇಳಿದರೂ ತಮ್ಮನ ಜ್ವರ ಬಿಟ್ಟದ್ದು, ಸಂಜೆ ಶೋಗೆ ಚಿತ್ರಮಂದಿರ ಹೌಸ್‌ಫುಲ್ ಎಂಬ ಸುದ್ದಿ ಕೇಳಿದ ನಂತರವೇ.
|