ಟಿವಿಯಲ್ಲಿ ನಿರೂಪಕರಾಗಿದ್ದವರು ಈಗೀಗ ಚಿತ್ರಗಳಲ್ಲಿ ನಾಯಕ ನಾಯಕಿಯರಾಗುತ್ತಾರೆ. ಉದಯ ಟಿವಿಯಲ್ಲಿ ಕಾಮಿಡಿ ಟೈಂ ನಡೆಸಿ ಕೊಡುತ್ತಿದ್ದ ಗಣೇಶ್ ಚಿತ್ರದಲ್ಲಿ ಮೊದಲ ಬಾರಿಗೆ ಚೆಲ್ಲಾಟ ಚಿತ್ರದಲ್ಲಿ ನಾಯಕನಾಗಿ ನಟಿಸಿ ಈಗ ದೊಡ್ಡ ಸ್ಟಾರ್ ಆಗಿದ್ದು ಇತಿಹಾಸ.
ಮುಂಗಾರು ಮಳೆ ಚಿತ್ರದ ನಂತರ ಗಣೇಶ್‌ಗೆ ಡಿಮ್ಯಾಂಡ್ ಹೆಚ್ಚಿದ್ದೇ ತಡ, ಅನೇಕ ಟಿವಿ ನಿರೂಪಕರು ತಾವು ಕೂಡಾ ಚಿತ್ರರಂಗದಲ್ಲಿ ನಾಯಕರಾಗಲು ಪ್ರಯತ್ನಿಸಿದರು. ಯು2ನಲ್ಲಿ ನಿರೂಪನಾಗಿದ್ದ ಆನಂದ್ ಮೊದಲ ಬಾರಿಗೆ ಮನಸುಗಳ ಮಾತು ಮಧುರ ಚಿತ್ರದಲ್ಲಿ ನಾಯಕನಾಗಿ ನಟಿಸಿದರು. ಚಿತ್ರ ಗೆಲ್ಲಲಿಲ್ಲ. ಆದರೆ ಇವರಿಗೆ ಬೇರೆ ಬೇರೆ ಅವಕಾಶಗಳು ದೊರೆತಿವೆ. ನನ್ನೆದೆಯಾ ಹಾಡು ಚಿತ್ರದಲ್ಲಿ ಆನಂದ್ ನಟಿಸುತ್ತಿದ್ದಾರೆ.
ನಾಯಕಿಯರ ವಿಷಯಕ್ಕೆ ಬಂದರೆ ಸುವರ್ಣ ವಾಹಿನಿಯಲ್ಲಿ ನಿರೂಪಕಿಯಾಗಿದ್ದ ಶ್ವೇತಾಗೆ ನಂದ ಲವ್ಸ್ ನಂದಿತಾ ಚಿತ್ರದಲ್ಲಿ ಅವಕಾಶ ಸಿಕ್ಕಿತು. ಚಿತ್ರವೂ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಈಗ ಈ ನಂದಿತಾಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್.
ಯು2 ವಾಹಿನಿಯ ನಿರೂಪಕ ಶ್ರವಂತ್ ಚಿಕ್ಕಮಗಳೂರ ಚಿಕ್ಕಮಲ್ಲಿಗೆ ಚಿತ್ರದಲ್ಲಿ ನಟಿಸಿರುವುದು ನಿಮಗೆ ಗೊತ್ತಿರಬಹುದು. ಈಗ ಮತ್ತೊಬ್ಬ ನಿರೂಪಕ ಗಾಂಧಿನಗರಕ್ಕೆ ತನ್ನ ಅದೃಷ್ಟ ಪರೀಕ್ಷೆಗೆಂದು ಬಂದಿದ್ದಾನೆ. ಉದಯ ಟಿವಿಯಲ್ಲಿ ನಿರೂಪಕನಾಗಿದ್ದ ರಾಹುಲ್ ಈಗ ನನ್ನುಸಿರೇ ನನ್ನುಸಿರೇ ಚಿತ್ರದಲ್ಲಿ ನಾಯಕ. ಯುವ ನಿರ್ದೇಶಕ ಸಂತೋಷ್ ರಾಹುಲ್‌ಗೆ ಒಂದು ಅವಕಾಶ ನೀಡಿದ್ದಾರೆ. ಮುಂದೇನಾಗುತ್ತದೋ ಗೊತ್ತಿಲ್ಲ.
|