ವರನಟ ಡಾ| ರಾಜ್‌ಕುಮಾರ್ ನಟಿಸಿದ ಸತ್ಯಹರಿಶ್ಚಂದ್ರ ಚಿತ್ರ ವರ್ಣಮಯವಾಗಿ ತೆರೆ ಮೇಲೆ ಕಂಗೊಳಿಸಲು ಸಿದ್ಧ್ದವಾಗಿದೆ. ಡಾ| ರಾಜ್ ಹುಟ್ಟುಹಬ್ಬದ ದಿನವಾದ ಈ ತಿಂಗಳ 24 ಕ್ಕೆ ಈ ಚಿತ್ರ ತೆರೆಕಾಣುತ್ತಿದೆ.
1963 ರಲ್ಲಿ ಕಪ್ಪು ಬಿಳುಪಿನಲ್ಲಿ ತೆರೆಕಂಡ ಈ ಚಿತ್ರ ಅಂದು ಭರ್ಜರಿ ಯಶಸ್ಸನ್ನು ಕಂಡು ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು. 1991-92 ರಲ್ಲಿ ಮತ್ತೆ ಈ ಚಿತ್ರ ಸಿಫಿಯಾ ಕಲರ್‌ನಲ್ಲಿ ತೆರೆಕಂಡು ಮತ್ತೊಮ್ಮೆ ಹಿಟ್ ಸಿನಿಮಾ ಆಗಿ ಹೊರಹೊಮ್ಮಿತ್ತು.
ಆದರೆ ಈಗ ಸತ್ಯ ಹರಿಶ್ವಂದ್ರ ಚಿತ್ರವನ್ನು ಕೆಸಿಎನ್ ಗೌಡ ಅವರು ಸಂಪೂರ್ಣವಾಗಿ ಬಣ್ಣದ ರೂಪದಲ್ಲಿ ಹೊರತರುತ್ತಿದ್ದಾರೆ. ಇವರು ನಾಲ್ಕು ವರ್ಷಗಳ ಹಿಂದೆ ವಿಜಯ್ ಪ್ರೊಡಕ್ಷನ್‌ನಿಂದ ಇದರ ಹಕ್ಕನ್ನು ಖರೀದಿಸಿದ್ದರು. ಇದರ ಜೊತೆಗೆ ಇವರು ಮಾಯಾಬಜಾರ್ ಹಾಗೂ ಜಗದೇಕವೀರನ ಕಥೆ ಚಿತ್ರಗಳ ಹಕ್ಕನ್ನು ಕೂಡಾ ಪಡೆದಿದ್ದರು. ಹೈದರಾಬಾದ್‌ನಲ್ಲಿರುವ ಅಮೆರಿಕಾ ಮೂಲದ ಗೋಲ್ಡನ್ ಟೆಕ್ನಾಲಜಿಯಲ್ಲಿ ಸುಮಾರು 200 ತಂತ್ರಜ್ಞರು 16 ತಿಂಗಳುಗಳ ಕಾಲ ಇದರ ಕಾರ್ಯಕ್ಕಾಗಿ ಶ್ರಮಿಸಿದ್ದಾರೆ. ಬೇರೆ ಕಡೆ ಪ್ರದರ್ಶನಕ್ಕೆ ಬಳಸಲಾದ ಇದರ ನೆಗೆಟಿವ್ ಅನ್ನು ಅಂದು 50 ಸಾವಿರ ರೂ ಗೆ ಪಡೆದು ಚಿತ್ರವನ್ನು ಬಣ್ಣದ ರೂಪಕ್ಕೆ ಪರಿವರ್ತಿಸುವ ಕಾರ್ಯಕ್ಕೆ ಅವರು ಮುಂದಾದರು.
ಭಾರತದಲ್ಲಿ ಯಾರೂ ಕಪ್ಪು ಬಿಳುಪಿನ ನೆಗೆಟಿವ್‌ವನ್ನು ಮಾರಾಟ ಮಾಡದ್ದರಿಂದ ಅಮೆರಿಕಾದಿಂದ ತರಬೇಕಾಯಿತು ಎನ್ನುತ್ತಾರೆ ಕೆಸಿಎನ್ ಗೌಡರ ಮಗ ಮೋಹನ್. ಮುಗಲ್-ಇ-ಅಜಮ್ ಹಾಗೂ ನಯಾ ದೌರ್ ಚಿತ್ರಗಳ ನಂತರ ವರ್ಣದಲ್ಲಿ ರೂಪಾಂತರ ಹೊಂದಿ ಬಿಡುಗಡೆಯಾಗುತ್ತಿರುವ ಮೂರನೇ ಚಿತ್ರ ಎಂಬ ಹೆಗ್ಗಳಿಕೆಗೆ ಸತ್ಯ ಹರಿಶ್ಚಂದ್ರ ಪಾತ್ರವಾಗುತ್ತಿದೆ ಚಿತ್ರದ ದೃಶ್ಯ ಹಾಗೂ ಧ್ವನಿ ಸಂಯೋಜನೆಯ ಕಾರ್ಯಕ್ಕೆ ಇವರ ಜೊತೆ ಹೆಗಲು ನೀಡಿದವರು ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್. ಧ್ವನಿ ತಂತ್ರಜ್ಞರಾದ ಇವರು ಬೇರೆ ಕಡೆಯಿಂದ ಆಮದು ಮಾಡಿಕೊಂಡ ಸಾಫ್ಟ್‌ವೇರ‌್‌ನ್ನು ಬಳಸಿ ಧ್ವನಿ ಸಂಯೋಜನೆಯನ್ನು ಕೂಡಾ ಮಾಡಿದ್ದಾರೆ ಎನ್ನುತ್ತಾರೆ ಮೋಹನ್.
ಚಿತ್ರವನ್ನು ಬಣ್ಣದ ರೂಪಕ್ಕೆ ಪರಿವರ್ತಿಸಲು ಇವರು 3.5 ಕೋಟಿ ರೂ. ವೆಚ್ಚ ಮಾಡಿದ್ದಾರೆ. ರಾಜ್ಯದ 30 ಚಿತ್ರಮಂದಿರಗಳಲ್ಲಿ ಇದು ಡಿಟಿಎಸ್ ಸಿನಿಮಾಸ್ಕೋಪ್‌ನಲ್ಲಿ ಪ್ರದರ್ಶನಗೊಳ್ಳಲಿದೆ. ಅಣ್ಣಾವ್ರು ಇರುವಾಗಲೇ ಇದನ್ನು ನಿರ್ಮಿಸಬೇಕೆಂದು ಭಾವಿಸಿದರಂತೆ. ಆದರೆ ವಿಧಿಯ ಆಟ ಬೇರೆಯೇ ಇತ್ತು. ಆದ್ದರಿಂದ ಈ ಬಾರಿ ಅಣ್ಣಾವ್ರ ಹುಟ್ಟುಹಬ್ಬದಂದು ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ ಎನ್ನುವ ಮೋಹನ್ ಅವರ ಸಾಧನೆಯನ್ನು ನಿಜಕ್ಕೂ ಮೆಚ್ಚಲೇಬೇಕು.
|