ಶಿವಣ್ಣನ ಮುಂದಿನ ಚಿತ್ರ ಪರಮೇಶ ಪಾನ್ವಾಲಾ. ಚಿತ್ರದ ಮುಹೂರ್ತ ಸೋಮವಾರ ನಡೆಯಿತು. ನಾಯಕ ಶಿವಣ್ಣ ಸಣ್ಣ ಯುವಕನ ಗೆಟಪ್‌ನಲ್ಲಿ ಜೀನ್ಸ್ ಪ್ಯಾಂಟ್ ಹಾಗೂ ಶಾರ್ಟ್ ಶರ್ಟ್ ಧರಿಸಿ ಕಂಗೊಳಿಸುತ್ತಿದ್ದರು. ಚಿತ್ರಕ್ಕೆ ಪುನಿತ್ ರಾಜ್ಕುಮಾರ್ ಕ್ಲಾಪ್ ಮಾಡಿದರು.
ಚಿತ್ರವನ್ನು ಆದಿತ್ಯಬಾಬು ನಿರ್ಮಿಸುತ್ತಿದ್ದು, ಮಹೇಶ್ಬಾಬು ನಿರ್ದೇಶಿಸುತ್ತಿದ್ದಾರೆ. ಇಲ್ಲಿ ನಿರ್ದೇಶಕರು ಚಿತ್ರದ ವಿಶಿಷ್ಟ ಪೋಸ್ಟರನ್ನು ತಯಾರಿಸಿದ್ದಾರೆ. ಕೈಗಳಲ್ಲಿ ನರಗಳು ಹುರಿಯಾಗಿರುವ, ದೇಹದ ಮೈ ಕಟ್ಟು ಬಿರುಸಾಗಿರುವ ಶಿವಣ್ಣ ಪೋಸ್ಟರ್‌ನಲ್ಲಿ ರಾರಾಜಿಸುತ್ತಿದ್ದಾರೆ. ಆದರೆ ಸರಿಯಾಗಿ ನೋಡಿದಾಗ ಮಾತ್ರ ಇದು ಬಾಲಿವುಡ್ ಬಾದ್‌ಶಾ ಶಾರುಖ್ಖಾನ್ ದೇಹಕ್ಕೆ ಶಿವಣ್ಣನ ಮುಖ ಜೋಡಿಸಿರುವುದೆಂದು ಗೊತ್ತಾಗುತ್ತದೆ.
ನಿರ್ದೇಶಕ ಬಾಬು ಈ ರೀತಿಯ ಒಂದು ಹೊಸ ಗಿಮಿಕ್ ಮಾಡುವ ಮೂಲಕ ಪ್ರೇಕ್ಷಕರನ್ನು ಆಕರ್ಷಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಬೇರೆಯವರ ದೇಹಕ್ಕೆ ಶಿವಣ್ಣನ ಮುಖ ಅಂಟಿಸಿರುವುದರ ಬಗ್ಗೆ ಕೆಲವು ಅಪಸ್ವರಗಳು ಕೂಡಾ ಕೇಳಿ ಬರುತ್ತಿವೆ. ಶಿವಣ್ಣ ಒಬ್ಬ ಉತ್ತಮ ನಟ. ನಲವತ್ತೆಂಟಾದರೂ 20ರ ಯುವಕನಂತೆ ತಮ್ಮ ದೇಹವನ್ನು ಕಾಯ್ದುಕೊಂಡಿದ್ದಾರೆ. ಆದರೂ ಈ ರೀತಿ ಮಾಡಲಾಗಿದೆ ಎಂಬುದು ಕೆಲವರ ಅಸಮಾಧಾನಕ್ಕೆ ಕಾರಣ. ಚಿತ್ರದ ಮುಹೂರ್ತ ಸಮಯದಲ್ಲಿ ರಾಜ್ ಕುಟುಂಬ ಹಾಜರಿದ್ದುದು ಎಲ್ಲರ ಗಮನ ಸೆಳೆದಿತ್ತು
|