ಕನ್ನಡಚಿತ್ರರಂಗದ ದಂತ ಕತೆ ಡಾ.ರಾಜ್ಕುಮಾರ್ ಜನ್ಮ ದಿನವಾದ ಏಪ್ರಿಲ್ 24ರಂದು ಹೊಸ ಜನ್ಮದ ಉಗಮವಾಗಲಿದೆ. ಏನೆಂದು ಅರ್ಥವಾಗಿಲ್ವ? ಹಾಗದರೆ ಇಲ್ಲಿಕೇಳಿ ರಾಜ್ಕುಮಾರ್ ಹುಟ್ಟುಹಬ್ಬದ ದಿನದಂದೇ 'ಜನ್ಮ' ಎಂಬ ಹೊಸ ಚಿತ್ರ ಸೆಟ್ಟೇರಲಿದೆ.
ಇದು ಹೊಸ ಹುಟ್ಟಿನ ಪ್ರತೀಕ. ಹೊಸ ರೀತಿಯ ವಿಭಿನ್ನ ಚಿತ್ರವೇ ಜನ್ಮ ಎಂದು ತಮ್ಮ ಚಿತ್ರದ ಬಗ್ಗೆ ಹೇಳಿದರು ನಿರ್ದೇಶಕ ಚಕ್ರವರ್ತಿ. ಈ ಹಿಂದೆ ಕರಿಯಾ ಚಿತ್ರ ನಿರ್ಮಿಸಿ ಪ್ರೇಮ್‌ಗೆ ಲೈಫ್ ಕೊಟ್ಟ ಆನೇಕಲ್ ಬಾಲರಾಜ್ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಕೆಂಪ ಚಿತ್ರದಲ್ಲಿನ ಸಂತೋಷ್ ನಾಯಕರಾಗಿ ನಟಿಸುತ್ತಿದ್ದಾರೆ.
ಚಿತ್ರದ ವಾಲ್‌ಪೋಸ್ಟರ್‌ಗಳನ್ನು ಎರಡು ತಿಂಗಳಿನಿಂದ ವಿಭಿನ್ನವಾಗಿ ರೂಪಿಸಲಾಗಿದೆ. ಪೋಸ್ಟರ್ನಲ್ಲಿ ಕ್ರಿಕೆಟ್ ಡ್ರೆಸ್ ತೊಟ್ಟು ಕೈಯಲ್ಲಿ ಮಚ್ಚು ಹಿಡಿದ ವ್ಯಕ್ತಿಯ ಚಿತ್ರ ರಾರಾಜಿಸುತ್ತಿದೆ. ಆದ್ದರಿಂದ ಇಲ್ಲಿ ಭೂಗತಲೋಕದ ಟಚ್ ಕೂಡಾ ಇದೆ ಎನ್ನುತ್ತಾರೆ ನಿರ್ಮಾಪಕ ಆನೇಕಲ್ ಬಾಲರಾಜ್.
ಚಿತ್ರದ ಪೋಸ್ಟರ್‌ನಲ್ಲಿನ 'ಕಾವೇರಿ ನಮ್ಮದು' ಎಂಬ ಘೋಷವಾಕ್ಯವೊಂದರ ಬಗ್ಗೆ ಪ್ರಶ್ನಿಸಿದಾಗ, ಸಾವಿರಾರು ವರ್ಷಗಳ ಹಿಂದಿನ ನಮ್ಮ ಜೀವನದಿ ಕಾವೇರಿ ಪರರಾಜ್ಯದ ಪಾಲಾಗುತ್ತಿದೆ. ಆದರೆ ಯಾರೊಬ್ಬರೂ ನಿಜ ಕಾಳಜಿಯೊಂದಿಗೆ ಹೋರಾಡುತ್ತಿಲ್ಲ. ಅದಕ್ಕಾಗಿ ಚಿತ್ರದ ಪೋಸ್ಟರ್ ಮೂಲಕವಾದರೂ ಇದರ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವಿದು ಎನ್ನುತ್ತಾರೆ ಚಕ್ರವರ್ತಿ.
ಗೂಳಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ ಅನೂಪ್ ಸೀಳೀನ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ 6 ಹಾಡುಗಳಿದ್ದು, ಒಂದು ಥೀಮ್ ಸಾಂಗ್ ಇದೆಯಂತೆ. ತಮಿಳಿನ ಕಲಾಭವನ್ ಮಣಿ ಇದರಲ್ಲಿ ನಟಿಸುವುದು ಬಹುತೇಕ ಖಚಿತವಾಗಿದೆ.
|