ಕನ್ನಡ ಚಿತ್ರರಂಗದಲ್ಲಿ ಹೊಸ ಸಿನಿಮಾ ಬಂದರೆ ಅದಕ್ಕೆ ವಿಶೇಷ ರೀತಿಯ ಪ್ರಚಾರ ಕಾರ್ಯ ಕೈಗೊಳ್ಳುತ್ತಾರೆ. ದೊಡ್ಡ ಬ್ಯಾನರ್, ಪೋಸ್ಟರ್, ಕಟೌಟ್‌ಗಳನ್ನು ರಾಜ್ಯಾದ್ಯಂತ ನಿಲ್ಲಿಸುತ್ತಾರೆ. ಬಸ್ಸಿನಲ್ಲಿ ಚಿತ್ರದ ಸಣ್ಣ-ಪುಟ್ಟ ದೃಶ್ಯಗಳನ್ನು ಅಂಟಿಸಿರುತ್ತಾರೆ. ಇತ್ತೀಚೆಗೆ ರಮೇಶ್ ಅರವಿಂದ್ ನಿರ್ದೇಶನದ ಆಕ್ಸಿಡೆಂಟ್ ಚಿತ್ರ ಅದರ ಹೆಸರಿರುವ ಟೀಶರ್ಟ್, ಕ್ಯಾಪ್ ನೀಡಿ ಪ್ರಚಾರ ಮಾಡಿದರೆ, ಜಿಂದಗಿ ಚಿತ್ರದ ತುಣುಕುಗಳನ್ನು ತೋರಿಸಿ ಜನರನ್ನು ಆಕರ್ಷಿಸಲು ಪ್ರಯತ್ನಿಸಿತು. ಆದರೆ ಶಿವಧ್ವಜ್ ನಿರ್ದೇಶನದ ನೀನೇನೀನೇ ಚಿತ್ರ ಇವೆಲ್ಲಕ್ಕಿಂತ ಭಿನ್ನವಾಗಿ ವಿಶೇಷ ರೀತಿಯ ಪ್ರಚಾರ ಕೈಗೊಂಡಿದೆ.
ಶುಕ್ರವಾರ ಬಿಡುಗಡೆಯಾದ ಗಣೇಶ್ ಅಭಿನಯದ ಅರಮನೆ ಚಿತ್ರಕ್ಕೆ ನೀವು ಹೋಗಿದ್ದರೆ ಯಾವ ರೀತಿಯ ವಿಶೇಷ ಪ್ರಚಾರ ಎಂದು ಗೊತ್ತಾಗಿರಬಹುದು. ಅರಮನೆ ಚಿತ್ರದ ಮಧ್ಯಂತರ ನಡುವಿನ ಸಮಯದಲ್ಲಿ ಪ್ರೇಕ್ಷಕರ ಕಣ್ಣಮುಂದೆ ನೀನೇ ನೀನೇಳಿ ಚಿತ್ರದ ಟ್ರೇಲರ್‌ಗಳು ಬರುತ್ತವೆ. ಈ ಒಂದೂವರೆ ನಿಮಿಷದ ಟ್ರೇಲರ್‌ಗಳಿಂದ ಚಿತ್ರಕ್ಕೆ ಉತ್ತಮ ಪ್ರಚಾರ ಸಿಗಬಹುದು ಎನ್ನುವುದು ನಿರ್ದೇಶಕ ಶಿವಧ್ವಜ್ ಅಭಿಪ್ರಾಯ.
ಅದರಲ್ಲೂ ಗಣೇಶ್ ಅಭಿನಯದ ಚಿತ್ರದಲ್ಲಿ ಇಂತಹ ಟ್ರೇಲರ್ ಬಳಸಿದ್ದರಿಂದ ಚಿತ್ರಕ್ಕೆ ಒಳ್ಳೆಯ ಪ್ರಚಾರ ಸಿಗಬಹುದು. ಯಾಕೆಂದರೆ ಗಣೇಶ್ ಚಿತ್ರಕ್ಕೆ ಓಪನಿಂಗ್ ಚೆನ್ನಾಗಿರುವುದರ ಜೊತೆಗೆ ಮನೆಮಂದಿಯೆಲ್ಲ ಬರುತ್ತಾರೆ. ಇದರಿಂದ ನಮ್ಮ ಚಿತ್ರಕ್ಕೂ ಉತ್ತಮ ಪ್ರಚಾರ ಸಿಗುತ್ತದೆ ಎನ್ನುವುದು ನೀನೇನೀನೇ ಚಿತ್ರದ ನಿರ್ಮಾಪಕ ಬಸವರೆಡ್ಡಿ ಅಭಿಪ್ರಾಯ.
ನಿಜಕ್ಕೂ ಇದೊಂದು ಉತ್ತಮ ವ್ಯವಸ್ಥೆ. ನಿರ್ಮಾಪಕರಿಬ್ಬರ ಹೊಂದಾಣಿಕೆಯಿಂದ ಇಂತಹ ಕಾರ್ಯಸಾಧ್ಯ. ನೀನೇನೀನೇ ಚಿತ್ರ ಇನ್ನು ಮೂರು ವಾರಗಳೊಳಗಡೆ ಬಿಡುಗಡೆಯಾಗಲಿದೆ. ಯಾವ ರೀತಿ ಜನರ ಪ್ರತಿಕ್ರಿಯೆ ಇರುತ್ತದೆ ಎಂಬುದನ್ನು ಕಾದು ನೋಡಬೇಕು.
|