ಪ್ರೀತಿ ಈಗ ವ್ಯವಹಾರಿಕ. ಏನಿದ್ದರೂ ಇಂಟರ್ನೆಟ್, ಶಾದಿ ಡಾಟ್ ಕಮ್ ಮೂಲಕ ಮದುವೆಗಳು ನಡೆಯುತ್ತವೆ. ಈ ನಡುವೆ ನಿಜವಾದ ಪ್ರೀತಿ ಸೊರಗುತ್ತಿದೆ ಇಂತಹದೇ ಕಥೆಯನ್ನಿಟ್ಟುಕೊಂಡು ಪ್ರಿಯಾ ಭಾರತಿ 'e-ಪ್ರೀತಿ' ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಚಿತ್ರದ ನಾಯಕ ಸಾಫ್ಟ್ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಸಾಫ್ಟ್ವೇರ್ ಎಂದ ಮೇಲೆ ವಿದೇಶ ಸುತ್ತಾಟ ಇದ್ದೇ ಇರುತ್ತದೆ. ಹೀಗೇ ನಾಯಕ ಅಮೆರಿಕಾಕ್ಕೆ ಹೋಗುತ್ತಾನೆ. ಅಲ್ಲಿ ಆತನನ್ನು ಹುಡುಗಿಯೊಬ್ಬಳು ಪ್ರೀತಿಸಲು ಆರಂಭಿಸುತ್ತಾಳೆ. ಆದರೆ ಆಕೆಯದ್ದು ಬರೀ ಇಂಟರ್ನೆಟ್ ಪ್ರೀತಿ. ಆದರೆ ನಾಯಕನಿಗೆ ಕನ್ನಡದ ನೆಲ್ಲದ ಮೇಲಿನ ಪ್ರೀತಿಯೇ ಶ್ರೇಷ್ಠ ಎಂಬ ಭಾವನೆ ಬರುತ್ತದೆ. ನಿರ್ದೇಶಕಿ ಪ್ರಿಯಾ ಭಾರತಿ ಇದನ್ನು ರೊಮ್ಯಾಂಟಿಕ್ ಕಾಮಿಡಿ ಚಿತ್ರ ಎಂದು ಕರೆಯುತ್ತಾರೆ. ಇವರು ಹಿಂದೆ ಗಣೇಶ್ ಮೊದಲ ಬಾರಿಗೆ ನಟಿಸಿದ ಗುಟ್ಟು ಎಂಬ ಟೆಲಿಚಿತ್ರವನ್ನು ನಿರ್ದೇಶಿಸಿದ್ದರು.
ಚಿತ್ರದಲ್ಲಿ ಇಂದಿನ ಡಿಜಿಟಲ್ ಯುಗ ನೈಜ ಪ್ರೀತಿಗೆ ಎಷ್ಟು ಮಾರಕ ಎಂಬುದನ್ನು ತೋರಿಸಲಾಗುತ್ತದೆ. ಚಿತ್ರದಲ್ಲಿ ನಾಯಕನಾಗಿ ದಿಗಂತ್ ನಟಿಸುತ್ತಿದ್ದಾರೆ. ನಾಯಕಿಯರಾಗಿ ಸವಿಸವಿ ನೆನಪು ಚಿತ್ರದಲ್ಲಿ ಎರಡನೇ ನಾಯಕಿಯಾಗಿ ನಟಿಸಿದ ತೇಜಸ್ವಿನಿ ಹಾಗೂ ಅಮೆರಿಕಾದಿಂದ ನೀನಾ ಮಹೇಶ್ ಎಂಬರನ್ನು ಕರೆತಂದಿದ್ದಾರೆ. ಇಲ್ಲಿ 6 ಹಾಡುಗಳಿವೆ. ಇದಕ್ಕೆ ಸುಚಿತ್ರಾ ಲತಾ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಜಯಂತ್ ಕಾಯ್ಕಿಣಿ ಸಾಹಿತ್ಯ ಮತ್ತು ಸಂಭಾಷಣೆ ಬರೆದಿದ್ದಾರೆ. ಅವಿನಾಶ್ ಮುಖ್ಯಮಂತ್ರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರವು, ಸ್ನೇಹ ಪ್ರೀತಿ ಡಿಜಿಟಲ್ ರೀತಿ ಎಂಬ ಅಡಿಬರಹವನ್ನು ಹೊಂದಿದೆ.
|