ನಿರ್ದೇಶಕ ಯೋಗರಾಜ್ ಭಟ್ ಸದ್ಯ ಹಾಯಾಗಿದ್ದಾರೆ. ತಾವು ನಿರ್ದೇಶಿಸಿದ ಎರಡು ಚಿತ್ರಗಳು ಹಿಟ್ ಆಗಿವೆ. ಗಾಳಿಪಟ ಕೂಡಾ ಶತದಿನವನ್ನು ಆಚರಿಸಿದೆ. ಈ ಖುಷಿಯಲ್ಲಿ ಭಟ್ ಒಂದು ಧಮ್ ಎಳೆಯಬಹುದಿತ್ತು. ಆದರೆ ಸಿಗರೇಟ್ ಬಿಟ್ಟಿದ್ದಾರೆ. ಗಾಳಿಪಟ ರೀಲೀಸ್ ಆದ ಸಮಯದಲ್ಲಿ ನೇರವಾಗಿ ಧರ್ಮಸ್ಥಳಕ್ಕೆ ಹೋಗಿ ಅಲ್ಲಿ ಸ್ವಲ್ಪ ದಿನ ಹಾಯಾಗಿದ್ದು, ಸಿಗರೇಟ್‌ಗೆ ತಿಲಾಂಜಲಿ ನೀಡಿ ಬಂದಿದ್ದಾರೆ.
ಈಗ ಭಟ್,ತಮ್ಮನ್ನು ಆಹ್ವಾನಿಸಿದ ಕೆಲವು ಕಾರ್ಯಕ್ರಮಗಳಿಗೆ ಹೋಗಿ ಮಗುಮ್ಮಾಗಿ ಕುಳಿತು ಎದ್ದು ಬರುತ್ತಾರೆ. ಎರಡು ಹಿಟ್ ಸಿನಿಮಾ ನೀಡಿದ ಭಟ್ ಮತ್ತೊಂದು ಹಿಟ್ ಸಿನಿಮಾ ನೀಡುವ ಯೋಚನೆ ತಲೆಯಲ್ಲಿ ಸುತ್ತುತ್ತಿರಬಹುದು.
ಯೋಗರಾಜ್ ಭಟ್ ಈಗ ಏನೂ ಮಾಡಿದರೂ ಅದನ್ನು ಹೊಸತನದಿಂದ ಮಾಡುತ್ತಾರೆ. ಹಿಂದೆ ಮಣಿ ಹಾಗೂ ರಂಗ ಎಸ್ಎಸ್ಎಲ್ಸಿ ಚಿತ್ರ ನಿರ್ದೇಶಿಸಿದ್ದರು. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಹೇಳಿಕೊಳ್ಳುವಂತಹ ಪ್ರತಿಕ್ರಿಯೆ ಲಭಿಸಿರಲಿಲ್ಲ. ಪರಿಣಾಮ, ಯೋಗರಾಜ್ ಭಟ್ ಇಂದು ಚಿತ್ರರಸಿಕರ ನಾಡಿಮಿಡಿತ ಅರಿತಿದ್ದಾರೆ.
ಮುಂಗಾರು ಮಳೆಯ ಅನೀರೀಕ್ಷಿತ ಯಶಸ್ಸು ಅನೇಕರಿಗೆ ಸ್ಟಾರ್ ಪಟ್ಟ ತಂದುಕೊಟ್ಟಿತು. ನಟರದ್ದು ಒಂದು ವಿಷಯವಾದರೆ, ನಿರ್ದೇಶಕರಾಗಿ ಯೋಗರಾಜ್ ಭಟ್ ಒಳ್ಳೆಯ ಸ್ಕೋಫ್ ಸಿಕ್ಕಿತು. ನಂತರ ಇವರ ಕಾಲ್ಶೀಟ್ಗೆ ಅನೇಕ ನಿರ್ಮಾಪಕರು ದುಂಬಾಲು ಬಿದ್ದರು.
ಆದರೆ ಭಟ್ ಮುಂಗಾರು ಮಳೆಯಂತಹ ಮತ್ತೊಂದು ಹಿಟ್ ಚಿತ್ರ ನೀಡುವ ಯೋಚನೆಯಲ್ಲಿದ್ದರು. ಅವರ ಆ ಕನಸಿನಲ್ಲಿ ಮೂಡಿಬಂದ ಮತ್ತೊಂದು ಚಿತ್ರ 'ಗಾಳಿಪಟ'. ಕಥೆ ಸಾಮಾನ್ಯವಾಗಿ ಕಂಡರೂ ಎಲ್ಲೂ ಬೋರ್ ಹೊಡೆಸದೇ ಗಣೇಶ್ ಮಾತು ಹಾಗೂ ಡೈಸಿಯ ಮೌನವನ್ನು ಬಳಸಿ ಚಿತ್ರವನ್ನು ಗೆಲ್ಲಿಸಿದ್ದಾರೆ.
ಮುಂಗಾರು ಮಳೆ ಯಶಸ್ಸಿನ ಬಗ್ಗೆ ಯೋಗರಾಜ್ ಭಟ್ ಹೇಳುವುದಿಷ್ಟು: "ಅದು ನನ್ನೊಬ್ಬನ ಪ್ರಯತ್ನವಲ್ಲ. ಒಂದು ತಂಡದ ಪ್ರಯತ್ನ. ಇದರ ಯಶಸ್ಸು ನಿರ್ದೇಶಕನಿಂದ ಹಿಡಿದು ಚಿತ್ರೀಕರಣದ ಸಮಯದಲ್ಲಿ ಟೀ ಲೋಟ ತೊಳೆದ ಹುಡುಗನಿಗೂ ಸಿಗುತ್ತದೆ. ನನ್ನ ಅಭಿಪ್ರಾಯದಲ್ಲಿ ಮುಂಗಾರು ಮಳೆ ಒಂದು ಉತ್ತಮ ಕಾಲಘಟ್ಟದಲ್ಲಿ ಬಂದಿತ್ತು. ಒಂದೇ ತರಹದ ಚಿತ್ರ ನೋಡಿ ಪ್ರೇಕ್ಷಕರು ಬೇಸತ್ತ ಸಂದರ್ಭದಲ್ಲಿ ಮಳೆ ಅವರಿಗೆ ತಣ್ಣನೆಯ ಅನುಭವ ನೀಡಿತು".
ಇದೀಗ, ರಾಕ್ಲೈನ್ ನಿರ್ಮಾಣದಲ್ಲಿ ಪುನೀತ್ ಚಿತ್ರ ಒಂದನ್ನು ಭಟ್ ನಿರ್ದೇಶಿಸುತ್ತಾರೆಂಬ ಮಾತು ಕೇಳಿ ಬರುತ್ತಿದೆ. ಏನೇ ಮಾಡಿದರೂ ಇವರು ಮಳೆಯಲ್ಲೆ ಮಾಡುತ್ತಾರೆ ಬಿಡಿ.
|