ಇದು ಹೊಸ ಚಿತ್ರಗಳ ಜಮಾನ. ದಿನೇ ದಿನೇ ಹೊಸ ಹೊಸ ಚಿತ್ರಗಳು ಸೆಟ್ಟೇರುತ್ತಿದ್ದಂತೆ ವಾರ ವಾರ ಎರಡು ಮೂರು ಚಿತ್ರಗಳು ಬಿಡುಗಡೆಗೆ ಸಿದ್ಧವಾಗುತ್ತಿವೆ. ಈ ವಾರ ಮೂರು ಚಿತ್ರಗಳು ತೆರೆ ಕಾಣಲಿವೆ.
ಶ್ರೀ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ತ್ರಿವಿಧ ದಾಸೋಹದ ಬಗ್ಗೆ ಬೆಳಕು ಚೆಲ್ಲುವ ಜ್ಞಾನಜ್ಯೌತಿ ಶ್ರೀ ಸಿದ್ಧಗಂಗಾ ಚಿತ್ರ ಮೇ 1 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಶ್ಲಾಘನೆ ವ್ಯಕ್ತಪಡಿಸಿದೆ. ಚಿತ್ರದ ಶೇ. 80 ರಷ್ಟು ಭಾಗವನ್ನು ಸಿದ್ಧಗಂಗಾ ಮಠದಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರವನ್ನು ಓಂಕಾರ್ ನಿರ್ದೇಶಿಸಿದ್ದು, ವಿಷ್ಣುವರ್ಧನ್, ಭಾರತಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.
ಮೇ1 ರಂದು ಬಿಡುಗಡೆಯಾಗುತ್ತಿರುವ ಮತ್ತೆರಡು ಚಿತ್ರ ಪ್ರಜ್ವಲ್ ದೇವರಾಜ್ ನಟಿಸಿರುವ 'ಗಂಗೆ ಬಾರೇ ತುಂಗೆ ಬಾರೇ' ಹಾಗೂ ಬರಗೂರು ರಾಮಚಂದ್ರಪ್ಪ ನಿರ್ದೇಶನದ 'ತಾಯಿ'. ತಾಯಿ ಕಾರ್ಮಿಕ ವರ್ಗದ ಶೋಷಣೆಯನ್ನು ಒಳಗೊಂಡ ಕಥೆ ಹೊಂದಿರುವ ಚಿತ್ರವಾದ್ದರಿಂದ ಮೇ 1 ಕಾರ್ಮಿಕ ದಿನದಂದೇ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಇಲ್ಲಿ ಪ್ರಮೀಳಾ ಜೋಷಾಯ್ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ. ತನ್ನ ಮಗನ ಬಿಡುಗಡೆಗಾಗಿ ಹೋರಾಟ ನಡೆಸುವ ತಾಯಿಯೊಬ್ಬಳು ಕೊನೆಗೆ ಇಡೀ ಸಮಾಜದ ಬಿಡುಗಡೆಗೆ ಹೇಗೆ ಕಾರಣಳಾಗುತ್ತಾಳೆ ಎಂಬುದನ್ನು ಇಲ್ಲಿ ತೋರಿಸಲಾಗಿದೆ.
|