ಮುಂಗಾರು ಮಳೆ ಚಿತ್ರ, ಆ ಚಿತ್ರದ ಹಾಡುಗಳು ಹಿಟ್ ಆಗಿರುವುದು ಹಳೆಯ ಮಾತು. ಆದರೆ ಈ ಚಿತ್ರದ 'ಅನಿಸುತಿದೆ ಯಾಕೋ....' ಹಾಡು ಜನಪ್ರಿಯವಾಗುತ್ತಿದ್ದಂತೆ ಅದನ್ನು ಹಾಡಿರುವ ಮುಂಬೈನ ಸೋನು ನಿಗಂ ಬೇಡಿಕೆ ಹೆಚ್ಚಿದೆ. ಶ್ರೀಮಂತ ನಿರ್ಮಾಪಕರೆಲ್ಲ ಸೋನುವಿನಿಂದ ಒಂದು ಹಾಡು ಹಾಡಿಸಲು ಮುಂದಾದರು. ಆದರೆ, ಈ ಸೋನು ಒಂದು ಹಾಡಿಗೆ ಪಡೆವ ಸಂಭಾವನೆ ಎಷ್ಟು ಗೊತ್ತೇ? ಎರಡು ಲಕ್ಷವಂತೆ!!
ಇದು ಸೋನು ನಿಗಮ್‌ಗೆ ಇರುವ ಡಿಮ್ಯಾಂಡನ್ನು ತೋರಿಸುತ್ತದೆ. ಇತ್ತೀಚೆಗೆ ಸೋನು ಮುಂಗಾರು ಮಳೆ, ಮಿಲನ, ಗೆಳೆಯ ಚಿತ್ರಗಳಿಗೆ ಹಾಡಿದ್ದರು. ಪ್ರಿಯಾ ಮೈ ಡಾರ್ಲಿಂಗ್ ಚಿತ್ರಕ್ಕೆ ಸೋನುರಿಂದ ಹಾಡಿಸಬೇಕೆಂದು ಅದರ ನಿರ್ಮಾಪಕರು ಆಸೆ ಪಟ್ಟರೆಂದು ಸೋನು ಜೊತೆ ಮಾತನಾಡಿಸಿದಾಗ ಸೋನು ಮೇ ಯಲ್ಲಿ ಡೆಟ್ಸ್ ಕೊಟ್ಟು 2 ಲಕ್ಷ ಕೇಳಿದರಂತೆ. ಕೊನೆಗೆ ಚೌಕಾಸಿ ಮಾಡಿ ಒಂದು ಲಕ್ಷ ಎಪ್ಪತ್ತು ಸಾವಿರಕ್ಕೆ ಒಪ್ಪಿಗೆ ಸೂಚಿಸಿದರಂತೆ. ಆದರೂ ಸೋನುವಿನಿಂದ ಹಾಡಿಸಲೇಬೇಕೆಂಬ ಆಸೆ.
ಕೆಲವೊಮ್ಮೆ ಬಾಲಿವುಡ್ ಗಾಯಕರಿಂದ ಹಾಡಿಸಬೇಕೆಂದರೆ ಇಲ್ಲಿಂದ ಸಂಗೀತ ನಿರ್ದೇಶಕ ಮುಂಬೈಗೆ ಹೋಗಿ ಅಲ್ಲಿ ಸ್ಟುಡಿಯೋ ಬುಕ್ ಮಾಡಬೇಕು. ಅವರು ಎಷ್ಟು ಹೊತ್ತಿಗೆ ಬರುತ್ತಾರೆಂದು ಕಾಯಬೇಕು. ಇದು ಕಷ್ಟದ ಕೆಲಸ. ಬಾಲಿವುಡ್ ಗಾಯಕರಿಂದಲೇ ಹಾಡಿಸಬೇಕೆಂದು ನಿರ್ಮಾಪಕರು ಹಠ ಹಿಡಿದರೆ ತಾನೂ ಸಂಭಾವನೆ ಏರಿಸುತ್ತೇನೆ ಎನ್ನುತ್ತಾರೆ ಸಂಗೀತ ನಿರ್ದೇಶಕ ಗುರುಕಿರಣ್.
|