ಕನ್ನಡದ ಕೆಲ ನಾಯಕ-ನಾಯಕಿಯರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಅವರು ನಟಿಸಿದ ಯಾವುದೇ ಚಿತ್ರಗಳನ್ನು ಪ್ರದರ್ಶಿಸಬಾರದೆಂದು ಚುನಾವಣಾ ಆಯೋಗ ಹೇಳಿದೆ. ಆದರೆ ಈಗ ಅಖಾಡದಲ್ಲಿರುವ ನಟರ ಹೊಸ ಸಿನಿಮಾವನ್ನು ಬಿಡುಗಡೆ ಮಾಡಬಾರದು ಹಾಗೂ ಅದರ ತುಣುಕುಗಳನ್ನು ಕೂಡಾ ಪ್ರದರ್ಶಿಸಬಾರದು ಎಂದು ಹೇಳಿದ್ದರಿಂದ ಇವರನ್ನು ನಂಬಿದ ನಿರ್ಮಾಪಕರು ಅಡಕತ್ತರಿಗೆ ಸಿಲುಕಿದ್ದಾರೆ.
ಏಪ್ರಿಲ್ ಕೊನೆ ವಾರದಲ್ಲಿ ಹಾಗೂ ಮೇ ತಿಂಗಳಲ್ಲಿ ದೊಡ್ಡ ನಾಯಕರ ಅನೇಕ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿತ್ತು. ಜಗ್ಗೇಶ್ ಅಭಿನಯದ ‘ಕೋಡಗನ ಕೋಳಿ ನುಂಗಿತ್ತಾ’ ಹಾಗೂ ‘ಟಾಟಾ-ಬಿರ್ಲಾ’ ಚಿತ್ರಗಳು ಬಿಡುಗಡೆಯಾಗಬೇಕಿತ್ತು. ಆದರೆ ಜಗ್ಗೇಶ್ ತುರುವೇಕೆರೆಯಿಂದ ಚುನಾವಣೆಗೆ ಸ್ಪರ್ಧಿಸುವುದರಿಂದ ಇದು ಸಾಧ್ಯವಾಗುತ್ತಿಲ್ಲ. ಅಂತೆಯೇ ಅಂಬರೀಶ್ ಅಭಿನಯದ ‘ತಿಪ್ಪಾರಳ್ಳಿ ತರ್ಲೆಗಳು’ ಕೂಡಾ ಬಿಡುಗಡೆಗೆಯಾಗಬೇಕಿತ್ತು. ಆದರೆ ಈ ರೆಬಲ್ ಸ್ಟಾರ್ ಕಣಕ್ಕಿಳಿದಿದ್ದಾರೆ.
ಚುನಾವಣಾ ಗ್ರಹಣ ಬಡಿದಿರುವ ಮತ್ತೆರಡು ಚಿತ್ರಗಳೆಂದರೆ ‘ಬಂಧು-ಬಳಗ’ ಹಾಗೂ ‘ಜಿಂದಗಿ’. ಬಂಧು- ಬಳಗದ ಶಿವಣ್ಣ ಚುನಾವಣೆಗೆ ಸ್ಪರ್ಧಿಸಿದ್ದಾರೆಯೇ ಎಂಬ ಸಂಶಯವೇ? ಶಿವಣ್ಣ ಸ್ಪರ್ಧಿಸದಿದ್ದರೆ ಏನಂತೆ, ಅದರಲ್ಲಿ ನಟಿಸಿದ ಶಶಿಕುಮಾರ್ ಸ್ಪರ್ಧಿಸುತ್ತಿದ್ದಾರೆ. ಇದರಿಂದ ಮೇ 16ರಂದು ಬಿಡುಗಡೆಯಾಗಬೇಕಿದ್ದ ಚಿತ್ರ ಮುಂದೆ ಹೋಗಿದೆ. ಜಿಂದಗಿಯಲ್ಲಿ ಎರಡನೇ ನಾಯಕಿಯಾಗಿ ನಟಿಸಿದ ಹೇಮಶ್ರೀ ಬಿಎಸ್ಪಿಯಿಂದ ಸ್ಪರ್ಧೆಗಿಳಿದಿದ್ದಾರೆ. ಇದರಿಂದ ಈ ಚಿತ್ರದ ಬಿಡುಗಡೆ ದಿನಾಂಕ ಕೂಡಾ ಪೋಸ್ಟ್‌ಪೋನ್ ಆಗಿದೆ.
ನಾಯಕರನ್ನು ನಂಬಿಕೊಂಡು ದುಡ್ಡು ಸುರಿದ ನಿರ್ಮಾಪಕರು ಹಾಕಿದ ದುಡ್ಡಿನಲ್ಲಿ ಸ್ವಲ್ಪವಾದರೂ ಬೇಗ ಬರಲಿ ಎಂದು ಬಿಡುಗಡೆಗೆ ಮುಂದಾದರೆ ಇಲ್ಲಿ ನಾಯಕರ ಚುನಾವಣಾ ಸಮಸ್ಯೆ ಎದುರಾಗಿದೆ.
|