ಜೀವನದಲ್ಲಿ ಬಾಟಲ್ ಹಾಗೂ ವೀಲ್‌ಗಳು ಬಹು ಮುಖ್ಯ. ಜೀವನ ಒಂದು ಬಂಡಿಯಂತೆ. ಈ ಬಂಡಿಗೆ ವೀಲ್ ಇಲ್ಲದಿದ್ದರೆ ಅದು ಸಾಗುವುದಿಲ್ಲ. ಕೆಲವೊಮ್ಮೆ ವೀಲ್ ಪಂಕ್ಚರ್ ಆದರೆ ಜೀವನದ ಬಂಡಿ ಎಲ್ಲಿ ನಿಲ್ಲುತ್ತದೆ ಎಂದು ಹೇಳಲಾಗದು. ಅದೇ ರೀತಿ ಬಾಟಲ್ ಕೂಡಾ ಮನುಷ್ಯನ ಜೀವನಕ್ಕೆ ತುಂಬಾ ಹತ್ತಿರ. ಮಗುವಾಗಿರುವಾಗ ಬಾಟಲ್‌ನಲ್ಲಿ ಹಾಲು ಕುಡಿಯುತ್ತೇವೆ. ಯೌವನದಲ್ಲಿ ಬಾಟಲ್‌ನಲ್ಲಿರುವ ಮದ್ಯ ಸೇವಿಸುತ್ತೇವೆ. ಆದರೆ ಜೀವನದ ಕೊನೆಯಲ್ಲಿ ಬಾಟಲ್‌ನಲ್ಲಿರುವ ಔಷಧಿ ಮೊರೆ ಹೋಗುತ್ತೇವೆ. ಹೀಗೆ ಬಾಟಲ್ ತುಂಬಾ ಮುಖ್ಯ. ಇಂತಹ ಒಂದು ವಿಶಿಷ್ಟ ಥಿಯರಿಯನ್ನಿಟ್ಟುಕೊಂಡು ಬರುತ್ತಿರುವ ಚಿತ್ರ ಆಟೋ.
ಕನ್ನಡದಲ್ಲಿ ಆಟೋ ಎಂಬ ಚಿತ್ರಗಳು ಬರುತ್ತಲೇ ಇವೆ. ಹಿಂದೆ ಆಟೋರಾಜ, ಆಟೋಶಂಕರ್ ಎಂಬ ಚಿತ್ರ ಬಂದವು. ಈಗ ಆಟೋ ಎಂಬ ಚಿತ್ರ ಬರುತ್ತಿದೆ. ವೀಲ್ ಎನ್ ಬಾಟಲ್ ಎಂಬ ಅಡಿಬರಹವನ್ನು ಚಿತ್ರ ಹೊಂದಿರುವುದು ವಿಶೇಷ.
ಚಿತ್ರದಲ್ಲಿ ಸತ್ಯ ಎಸ್.ನಾಯಕನಾಗಿ ನಟಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾಯಕನೇ ಹೆಚ್ಚು ಮಾತನಾಡಿ ಚಿತ್ರದ ಬಗ್ಗೆ ಹೇಳಿದರು. ನಾಯಕನೇ ಇಲ್ಲಿ ಚಿತ್ರಕಥೆ ಬರೆದಿದ್ದಾರೆ. ಭಯ ಡಾಟ್.ಕಾಮ್‌ನಲ್ಲಿ ನಟಿಸಿರುವ ರೋಶನಿ ನಾಯಕಿಯಾಗಿ ನಟಿಸುತ್ತಿದ್ದಾಳೆ. ಇಲ್ಲಿ ಹೊಸಬರ ದಂಡೇ ಇದೆ. ಚಿತ್ರವನ್ನು ಮಲ್ಲಿಕಾರ್ಜುನ ಮುತ್ತಲಗೇರಿ ನಿರ್ದೇಶಿಸುತ್ತಿದ್ದು, ಮಹೇಂದ್ರ ಮುನೋಟ ಹಣ ಹೂಡಿದ್ದಾರೆ.
|