ಆಧುನಿಕ ಮಹಿಳೆ ಎಲ್ಲದರಲ್ಲೂ ಮುಂದು. ಪುರುಷರು ಮಾಡುವ ಎಲ್ಲ ಕೆಲಸಗಳಿಗೂ ಇವರು ಈಗ ಸಮಾನರು. ಚಿತ್ರದ ನಿರ್ದೇಶನದ ವಿಷಯಕ್ಕೆ ಬಂದರೆ ಇಲ್ಲೂ ಅಷ್ಟೇ, ಮಹಿಳೆ ಪುರುಷನಿಗೆ ಸಮಾನಳಾಗಿದ್ದಾಳೆ. ಸ್ಲಂ ಬಾಲಾ ಚಿತ್ರವನ್ನು ಸುಮನಾ ಕಿತ್ತೂರು ಎಂಬ ಪತ್ರಕರ್ತೆ ನಿರ್ದೇಶಿಸುತ್ತಿದ್ದಾರೆ. ಚಿತ್ರ ಈಗಾಗಲೇ ಅಂತಿಮ ಘಟ್ಟದಲ್ಲಿದೆ.
ಬೆಂಗಳೂರಿನ ಬೇರೆ ಬೇರೆ ತಾಣಗಳಲ್ಲಿ ಚಿತ್ರೀಕರಿಸಿದ ಸ್ಲಂ ಬಾಲಾ ಚಿತ್ರಕ್ಕಾಗಿ ಬಾಂಬೆಗೆ ಹೋಗಿ ಅಲ್ಲಿ 13 ದಿನ ಚಿತ್ರೀಕರಿಸಿಕೊಂಡು ಬಂದಿದ್ದಾರೆ. ಬಾಂಬೆ ಎಂದರೆ ಅಲ್ಲಿ ಸ್ಲಂಗಳಿಗೆ ಕೊರತೆಯಿಲ್ಲ. ಚಿತ್ರದ ಕಥೆಗೆ ಅಲ್ಲಿನ ಕೆಲವು ಸನ್ನಿವೇಶಗಳ ಅಗತ್ಯವಿತ್ತು. ಸ್ಲಂ ಹುಡುಗ ಹಾಗೂ ಆತನ ಗೆಳತಿ ಡಾನ್ಸರ್ ಒಬ್ಬಳ ಬದುಕನ್ನು ಹೇಳುವ ಕಥೆಯನ್ನು ಚಿತ್ರ ಒಳಗೊಂಡಿದೆ. ಮುಂಬೈಯಂತಹ ಮಹಾನಗರದಲ್ಲಿ ಚಿತ್ರೀಕರಿಸುವುದು ಸುಲಭದ ಕೆಲಸವಲ್ಲ. ಆದರೂ ಅಲ್ಲಿನ ಪ್ರಸಿದ್ಧ ದರ್ಗಾ, ಗೇಟ್ ವೇ ಆಫ್ ಇಂಡಿಯಾ ಹಾಗೂ ಶಾರುಖ್ ಮನೆ ಎದುರಿನ ಸುಂದರ ಕಡಲ ಕಿನಾರೆಯನ್ನು ಚಿತ್ರೀಕರಿಸಿಕೊಂಡಿದ್ದಾರಂತೆ.
ಯಾವ ರೀತಿ ಹಾಗೂ ಯಾವ ಯಾವ ತಾಣಗಳಲ್ಲಿ ಚಿತ್ರೀಕರಿಸಬೇಕೆಂದು ನಿರ್ದೇಶಕಿ ಸುಮನಾ ಮೊದಲೇ ಆಲೋಚಿಸಿದ್ದರಂತೆ. ಮುಂಬೈಯಲ್ಲೂ ಜಿಮ್ಮಿಜಿಪ್ ಕ್ಯಾಮೆರಾ, ಟ್ರಾಲಿ ಬಳಸಿ ಚಿತ್ರೀಕರಣ ಮಾಡಿದ್ದಾರಂತೆ. ನಿರ್ಮಾಪಕ ರವೀಂದ್ರ ಬಜೆಟ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದರು ಸುಮನಾ ಕಿತ್ತೂರು. ಚಿತ್ರದಲ್ಲಿ ವಿಜಯ್, ಶುಭಾ ಪೂಂಜಾ, ಶಶಿಕುಮಾರ್, ಉಮಾಶ್ರೀ ನಟಿಸಿದ್ದಾರೆ.
|