ಕನ್ನಡ ಚಿತ್ರರಂಗಕ್ಕೂ ಕರಾವಳಿಯ ಕಡಲ ತಡಿಗೂ ಏನೋ ಒಂದು ನಂಟು. ಕನ್ನಡದ ಹೆಚ್ಚಿನ ಚಿತ್ರಗಳಲ್ಲಿ ಒಂದಲ್ಲ ಒಂದು ದೃಶ್ಯವನ್ನು ಅಥವಾ ಹಾಡನ್ನು ಮಂಗಳೂರಿನ ಬೀಚ್‌ಗಳಲ್ಲಿ ಚಿತ್ರೀಕರಿಸುತ್ತಾರೆ. ಇತ್ತೀಚೆಗೆ ಕಾಳಿದಾಸ ಲವ್ವಲ್ ಬಿದ್ದ ಹಾಗೂ ತಾಜ್‌ಮಹಲ್ ಚಿತ್ರಗಳನ್ನು ಕೂಡಾ ಮಂಗಳೂರಿನ ಬೀಚ್‌ಗಳಲ್ಲಿ ಚಿತ್ರೀಕರಿಸಿದ್ದಾಯಿತು. ಈಗ ಪ್ರಿಯಾ ಚಿತ್ರದ ನಾಯಕ-ನಾಯಕಿಯರ ಪ್ರಣಯ ಸಲ್ಲಾಪಗಳನ್ನು ಆ ಭೋರ್ಗರೆಯುವ ಅಲೆಗಳ ಮಧ್ಯೆ ಚಿತ್ರೀಕರಿಸಿಕೊಳ್ಳಲಾಗುತ್ತಿದೆ.
ಚಿತ್ರದಲ್ಲಿ ಸೂರ್ಯ ನಾಯಕನಾಗಿ ಹಾಗೂ ವಿದ್ಯಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇಲ್ಲಿ ನಾಯಕಿ ತಾನು ವಿದ್ಯಾಭ್ಯಾಸ ಮಾಡಿದ ಕಾಲೇಜಿನಲ್ಲೇ ಉಪನ್ಯಾಸಕಿಯಾಗಿ ಕೆಲಸಕ್ಕೆ ಸೇರುತ್ತಾಳೆ. ಒಂದು ದಿನ ಸಂಜೆ ಆಕೆ ಲೈಬ್ರೇರಿಯಲ್ಲಿ ಕುಳಿತಿರುವಾಗ ಕೆಲಸದಾತ ಗೊತ್ತಿಲ್ಲದೇ ಬಾಗಿಲು ಹಾಕಿ ಹೋಗುತ್ತಾನೆ. ಆಗ ನಾಯಕಿ ಸಹಾಯಕ್ಕಾಗಿ ತನ್ನ ಸ್ನೇಹಿತರಿಗೆ ಫೋನ್ ಮಾಡುತ್ತಾಳೆ. ಆದರೆ ಇವಳು ಮಾಡಿದ ಫೋನ್ ತಪ್ಪಿ ನಾಯಕನಿಗೆ ಹೋಗುತ್ತದೆ. ಇಲ್ಲಿ ನಾಯಕ-ನಾಯಕಿಯರ ನಡುವೆ ಒಂದು ಫ್ಲಾಶ್ ಬ್ಯಾಕ್ ಇರುತ್ತದೆ. ನಾಯಕಿಗೆ ಸೇಡು ತೀರಿಸಲೆಂದು ಬರುವ ನಾಯಕ ಮತ್ತೆ ಹೇಗೆ ಮೃದುವಾಗುತ್ತಾನೆ ಎಂಬುದು ಚಿತ್ರದ ಒನ್‌ಲೈನ್ ಸ್ಟೋರಿ.
ಗಂಧರ್ವ ಅವರು ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ಸಂಗೀತ ನೀಡಿದ್ದಾರೆ. ಚಿತ್ರವನ್ನು ವೆಂಕಟೇಶ್ ಪ್ರಸಾದ್ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಅವಿನಾಶ್, ಗೌತಮ್, ಶಂಕರರಾವ್, ಅನಿತಾ ನಟಿಸುತ್ತಿದ್ದು, ಚಿತ್ರದ ಒಂದು ಹಾಡನ್ನು ಸೋನು ನಿಗಮ್ ಹಾಡಲಿದ್ದಾರೆ.
|