ಕನ್ನಡ ಚಿತ್ರರಂಗದ ಸ್ಪುರದ್ರೂಪಿ ನಟ ರಮೇಶ್ ಅರವಿಂದ್ ಏನೇ ಮಾಡಿದರೂ ಸ್ವಲ್ಪ ಹೊಸದಾಗಿಯೇ ಮಾಡುತ್ತಾರೆ. ಈ ಹಿಂದೆ ಅವರು ನಿರ್ದೇಶಿಸಿದ ರಾಮ ಶಾಮ ಭಾಮ ಹಾಗೂ ಸತ್ಯವಾನ ಸಾವಿತ್ರಿ ಚಿತ್ರಗಳು ಹಾಸ್ಯ ಪ್ರಧಾನವಾಗಿ ಎಲ್ಲರಿಗೂ ಇಷ್ಟವಾದರೆ, ಇತ್ತೀಚೆಗೆ ನಿರ್ದೇಶಿಸಿದ ಆಕ್ಸಿಡೆಂಟ್ ಎಂಬ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಒಂದು ವರ್ಗದ ಜನತೆಗೆ ಇಷ್ಟವಾಗಿದೆ. ಈಗ ರಮೇಶ್ ಮತ್ತೆ ಚಿತ್ರ ನಿರ್ದೇಶಿಸಲು ಮುಂದಾಗಿದ್ದಾರೆ.
ಗಣೇಶಯ್ಯ ಅವರ ಕರಿಸಿರಿಯಾನ ಮತ್ತು ಕನಕ ಮುಸುಕು ವೈಜ್ಞಾನಿಕ ಕಾದಂಬರಿಯನ್ನು ಅಧರಿಸಿ ಒಂದು ಹೊಸ ಚಿತ್ರ ಮಾಡುವ ಸಿದ್ಧತೆಯಲ್ಲಿದ್ದಾರೆ. ಈಗಾಗಲೇ ಮಾತುಕತೆ ನಡೆಯುತ್ತಿದೆ. ಸುಮಾರು 6 ಕೋಟಿ ಬಜೆಟ್‌ನ ಚಿತ್ರ. ಆದರೆ ನಿರ್ಮಾಪಕರಾರು ಎಂದು ಇನ್ನು ನಿರ್ಧಾರವಾಗಿಲ್ಲ. ರಮೇಶ್ ಮತ್ತೊಂದು ಉತ್ತಮ ಚಿತ್ರ ನೀಡುವ ನೀರೀಕ್ಷೆಯಲ್ಲಿ ಚಿತ್ರಕಥೆ ತಯಾರಿಸುತ್ತಿದ್ದಾರೆ.
ಈ ಹೊಸ ಚಿತ್ರದಲ್ಲಿ ರಮೇಶ್ ಮಗ್ನರಾಗಿರುವುದರಿಂದ ಅವರಿಗೆ ಬೇರೆ ಚಿತ್ರಗಳಲ್ಲಿ ನಟಿಸಲು ಕೂಡಾ ಸಮಯವಿಲ್ಲ. ಈಗಾಗಲೇ ರಮೇಶ್ ನಮ್ಮೆಜಮಾನ್ರು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದರು. ಆದರೆ ನಯವಾಗಿಯೇ ನಾಗಾಭರಣ ಅವರನ್ನು ಒಪ್ಪಿಸಿ ಚಿತ್ರತಂಡದಿಂದ ಹೊರ ಬಂದಿದ್ದಾರೆ. ರಮೇಶ್ ಏನಾದರೂ ಒಂದು ಹೊಸದನ್ನು ನೀಡಬೇಕೆಂಬ ತುಡಿತದಲ್ಲಿದ್ದಾರೆ. ಆಕ್ಸಿಡೆಂಟ್ ಪಿವಿಆರ್‌ನಲ್ಲಿ ಚೆನ್ನಾಗಿ ಓಡುತ್ತಿದೆ. ಆದರೆ ಸಾಮಾನ್ಯ ಜನರಿಗೆ ಈ ಚಿತ್ರ ಮುಟ್ಟಲಿಲ್ಲ. ಹಾಗಂತ ಹಾಕಿದ ದುಡ್ಡನ್ನು ಇದು ನಿರ್ಮಾಪಕರಿಗೆ ತಂದುಕೊಟ್ಟಿದೆ. ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ರಮೇಶ್ ಕನ್ನಡದಲ್ಲಿ ವೈಜ್ಞಾನಿಕ ಸಿನಿಮಾ ಮಾಡಲು ಹೊರಟ್ಟಿದ್ದಾರೆ. ಏನಾಗುತ್ತದೋ ಮುಂದಕ್ಕೆ ನೋಡಬೇಕಷ್ಟೆ.
|