ಕನ್ನಡ ಚಿತ್ರರಂಗದಲ್ಲಿ ರೌಡಿಸಂ, ಪ್ರೇಮಕತೆಗಳಿಗೆ ಏನೂ ಭರವಿಲ್ಲ. ಇಂತಹ ಕಥೆಯನ್ನಿಟ್ಟುಕೊಂಡು ವಾರ ವಾರ ಒಂದಷ್ಟು ಚಿತ್ರಗಳು ಮುಹೂರ್ತ ಕಾಣುತ್ತಿವೆ. ಮನುಷ್ಯನ ಭಾವನೆಗಳನ್ನು ಬಿಂಬಿಸುವ ಸೆಂಟಿಮೆಂಟ್ ಚಿತ್ರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ತಬ್ಬಲಿ ಚಿತ್ರ ಮಾತ್ರ ಮನುಷ್ಯರ ನಡುವಿನ ಭಾವನಾತ್ಮಕ ಸಂಬಂಧವನ್ನು ಬಿಂಬಿಸುವ ಚಿತ್ರ.
ಇದು ಮಹಿಳೆಯರನ್ನು ಹೆಚ್ಚು ಗಮನದಲ್ಲಿಟ್ಟುಕೊಂಡು ಬರುತ್ತಿರುವ ಚಿತ್ರ ಎನ್ನುತ್ತಾರೆ ಚಿತ್ರದ ನಿರ್ದೇಶಕ ಲೋಕನಾಥ್. ಇಲ್ಲಿ ತಾಯಿ-ಮಗುವಿನ ಭಾವನಾತ್ಮಕ ಸಂಬಂಧವನ್ನು ಬಿಂಬಿಸಲಾಗಿದೆ. ಚಿತ್ರದಲ್ಲಿ ಆಕಾಶ್ ಹಾಗೂ ಮೇಘನಾ ಭಾಗವತರ್ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಾರುಲತಾ ಕೂಡಾ ಇಲ್ಲಿ ನಟಿಸುತ್ತಿದ್ದಾರೆ.
ಚಿತ್ರದ ಮೂರು ಹಾಡುಗಳಿಗೆ ನಿರ್ದೇಶಕ ಮೂಗೂರು ಸುಂದರಂ ನೃತ್ಯ ಸಂಯೋಜಿಸಿದ್ದಾರೆ. ಚಿತ್ರೀಕರಣವನ್ನು ಮೈಸೂರಿನ ಸ್ಲಂ ಪ್ರದೇಶದಲ್ಲಿ ಮಾಡಲಾಗಿದೆ. ಹಿಂದೆ ಇದೇ ಸ್ಥಳದಲ್ಲಿ ಚಂಡ ಚಿತ್ರದ ಚಿತ್ರೀಕರಣವೂ ನಡೆದಿತ್ತು. ಚಿತ್ರವನ್ನು ಜೂನ್‌ನಲ್ಲಿ ಬಿಡುಗಡೆಗೊಳಿಸಲು ಲೋಕನಾಥ್ ಸಿದ್ಧತೆ ನಡೆಸುತ್ತಿದ್ದಾರೆ. ತಬ್ಬಲಿ ಬಿಡುಗಡೆಯಾದ ನಂತರ ಲೋಕನಾಥ್ ಧರಣಿ ಮಾಡಲಿದ್ದಾರೆ.
|