ಮುಂಗಾರು ಮಳೆಗೆ ಚಿತ್ರಕಥೆ ಬರೆದ ಪ್ರೀತಂ ಗುಬ್ಬಿ ಹಾಗೇ ಸುಮ್ಮನೆ ಎಂಬ ಚಿತ್ರ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಮಾತಿನ ಹಂತದ ಚಿತ್ರೀಕರಣ ಮುಗಿದಿದ್ದು, ಹಾಡಿನ ಭಾಗದ ಚಿತ್ರೀಕರಣಕ್ಕೆ ತಂಡ ಸಿದ್ಧತೆ ನಡೆಸುತ್ತಿದೆ. ಭರ್ಜರಿ ಯಶಸ್ಸಿನ ಮುಂಗಾರು ಮಳೆ ಚಿತ್ರದಲ್ಲಿ ಕೆಲಸ ಮಾಡಿದ ತಾಂತ್ರಿಕ ವರ್ಗ ಇಲ್ಲೂ ಕೆಲಸ ಮಾಡುತ್ತಿದೆ.
ಚಿತ್ರದಲ್ಲಿ ಕಿರಣ್ ನಾಯಕನಾಗಿ ಹಾಗೂ ಸುಹಾಸಿನಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಮುಂಗಾರು ಮಳೆಯ ಯಾವುದೇ ಪ್ರಭಾವ ಇರುವುದಿಲ್ಲ. ಅಲ್ಲಿ ಹಚ್ಚ ಹಸಿರು, ಮಳೆಯನ್ನು ತೋರಿಸಿದರೆ ಇಲ್ಲಿ ಒಣ ನೆಲ ಹಾಗೂ ನೀರನ್ನು ತೋರಿಸಲಾಗುತ್ತದೆ ಎಂದರು ನಿರ್ದೇಶಕ ಪ್ರೀತಂ ಗುಬ್ಬಿ. ಪ್ರೀತಂ ಗುಬ್ಬಿ ಮುಂಗಾರು ಮಳೆ ಭಾಗ-2ನ್ನು ನಿರ್ದೇಶಿಸಬೇಕಿತ್ತು. ಆದರೆ ಗಣೇಶ್ ಒಪ್ಪದ ಕಾರಣ ಈ ಯೋಜನೆಯನ್ನು ಕೈಬಿಟ್ಟರು.
ಯಾರೂ ಮಾಡದ ಜಾಗದಲ್ಲಿ ಚಿತ್ರೀಕರಣ ಮಾಡಿದ್ದೇವೆ. ನನ್ನ ಹಾಗೂ ಕ್ಯಾಮರಾಮ್ಯಾನ್ ಕೃಷ್ಣ ಅವರ ಕಲ್ಪನೆಗೆ ನಿಲುಕಿದ ಯೋಚನೆಗಳನ್ನು ಚಿತ್ರೀಕರಿಸಿದ್ದೇವೆ. ಚಿತ್ರದ ಆರು ಹಾಡುಗಳಿಗೆ ಮನೋಮೂರ್ತಿ ಸಂಗೀತ ಸಂಯೋಜಿಸಿದ್ದಾರೆ. ಇಲ್ಲಿ ಚಿತ್ರದ ನಾಯಕ ಸೋಂಬೇರಿ. ಅವನಿಗೆ ಗೊತ್ತಿಲ್ಲದೇ ಪ್ರೀತಿಯ ಬಲೆಯಲ್ಲಿ ಬೀಳುತ್ತಾನೆ. ಹಾಗಂತ ಅದನ್ನು ಆತ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಚಿತ್ರದ ಬಗ್ಗೆ ಹೇಳಿದರು ಪ್ರೀತಂ.
|