ಹೊರಾಂಗಣ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿರುವ ಮುಂಗಾರು ಮಳೆ, ಗಾಳಿಪಟ ಮುಂತಾದ ಚಿತ್ರಗಳು ಹಿಟ್ ಆಗುತ್ತಿರುವಂತೆ ಇತ್ತ ಹೊರಗಡೆ ಮನೆ, ರೆಸಾರ್ಟ್‌ಗಳನ್ನು ಬಾಡಿಗೆಗೆ ಕೊಡುವ ಮಂದಿ ಕೂಡಾ ಚುರುಕಾಗಿದ್ದಾರೆ. ಇತ್ತೀಚೆಗೆ ಗಾಳಿಪಟದ ಚಿತ್ರೀಕರಣಕ್ಕಾಗಿ ಮನೆಯೊಂದನ್ನು ಬಾಡಿಗೆಗೆ ಪಡೆದು ಚಿತ್ರೀಕರಣ ನಡೆಸಲಾಯಿತು. ಚಿತ್ರವೂ ಹಿಟ್ ಆಯಿತು.
ಈಗ ಚಿತ್ರೀಕರಣಕ್ಕೆ ಮನೆ ಬಾಡಿಗೆಗೆ ಪಡೆದರೆ ರೆಸಾರ್ಟ್ ಮಾಲೀಕರು ಸಿಕ್ಕಾಪಟ್ಟೆ ಬಾಡಿಗೆ ಹೇಳುತ್ತಾರೆ. ನಿರ್ಮಾಪಕರು ಅಗತ್ಯವಿದ್ದರೆ ನೀಡಲೇಬೇಕು. ಇತ್ತೀಚೆಗೆ ಈ ಅನುಭವ 'ಮೇಘವರ್ಷಿಣಿ' ಚಿತ್ರದ ನಿರ್ದೇಶಕ ಶಿವರುದ್ರಯ್ಯನವರಿಗೆ ಆಗಿದೆ. ಮಲೆನಾಡಿನಲ್ಲಿರುವ ಮನೆಯೊಂದಕ್ಕೆ ಹುಡುಕಾಟ ಮಾಡುತ್ತಿದ್ದಾಗ ಅವರಿಗೆ ಚಿಕ್ಕಮಗಳೂರಿನಲ್ಲಿ ರೆಸಾರ್ಟ್ ಒಂದು ಸಿಕ್ಕಿತು.
ರೆಸಾರ್ಟ್ ಸಿಕ್ಕಿತೆಂಬ ಖುಷಿಯಲ್ಲಿ ಬಾಡಿಗೆ ಕೇಳಲು ಹೋದರೆ ಅದು ತಲೆ ತಿರುಗುವಂತಿತ್ತು. ಸಾಮಾನ್ಯವಾಗಿ ಒಂದು ದಿನಕ್ಕೆ ಒಂದು ರೂಂಗೆ 800 ರೂ. ಬಾಡಿಗೆ. ಆದರೆ ಇದು ಶೂಟಿಂಗ್‌ಗೆ ಎಂದು ತಿಳಿದದ್ದೇ, ದಿನಕ್ಕೆ 35 ಸಾವಿರ ರೂ. ಬಾಡಿಗೆ ಹೇಳಿದರಂತೆ. ಕಾರಣ ಗಾಳಿಪಟ ಎಫೆಕ್ಟ್! ಗಾಳಿಪಟ ಚಿತ್ರವನ್ನು ಅದೇ ಜಾಗದಲ್ಲಿ ಶೂಟಿಂಗ್ ಮಾಡಲಾಗಿತ್ತಂತೆ. ಕೊನೆಗೆ ಅನಿವಾರ್ಯವಾಗಿ ದಿನಕ್ಕೆ 35 ಸಾವಿರ ರೂ. ನೀಡಿ ಶೂಟಿಂಗ್ ಮಾಡಿದೆ ಎನ್ನುತ್ತಾರೆ ನಿರ್ದೇಶಕ ಶಿವರುದ್ರಯ್ಯ. ಹೇಗಿದೆ ಗಾಳಿಪಟ ಮಹಿಮೆ?
|