ಹೃದಯಶಿವ ಅವರ ಹೃದಯಕ್ಕೆ ಶಾನೆ ಬೇಜಾರಾಗಿದೆ. ಬಹುದಿನಗಳಿಂದ ತುಂಬಿಕೊಂಡಿದ್ದ ಬೇಸರವನ್ನು ಅವರು ಹೊರಹಾಕಿದರು. ಇತ್ತೀಚೆಗೆ ನಡೆದ '10ನೇ ಕ್ಲಾಸ್ ಎ ಸೆಕ್ಷನ್' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಬೇಸರವನ್ನು ಹೇಳಿಕೊಂಡರು. ಅದೇನೆಂದರೆ ತಾವು ಈ ಹಿಂದೆ ಕೆಲವು ಸಿನಿಮಾಗಳಿಗೆ ಬರೆದ ಹಾಡನ್ನು ಸಾಹಿತ್ಯದ ಗಂಧಗಾಳಿ ಗೊತ್ತಿಲ್ಲದವರು ತಿದ್ದಿ ತೀಡಿ ಅದನ್ನು ಹಾಡಾಗಿ ಬಳಸಿಕೊಂಡಿದ್ದಾರಂತೆ.
ಕೆಲವು ನಿರ್ಮಾಪಕ, ನಿರ್ದೇಶಕರಿಗೆ ಅಥವಾ ಇನ್ಯಾರೋ ನಾಯಕರಿಗೆ ಸಾಹಿತ್ಯ, ಹಾಡಿನ ಬಗ್ಗೆ ಏನೂ ಗೊತ್ತಿಲ್ಲದಿದ್ದರೂ ಅದನ್ನು ಎಡಿಟ್ ಮಾಡಲು ಮುಂದಾಗುತ್ತಾರಂತೆ. ಈ ಹಿಂದೆ ಇವರ 80ಕ್ಕೂ ಹೆಚ್ಚಿನ ಹಾಡುಗಳಲ್ಲಿ ಶೇ. 60 ರಷ್ಟು ಹಾಡುಗಳನ್ನು ಹೀಗೆ ತಿದ್ದಿ ಹಾಡಾಗಿಸಿದ್ದಾರಂತೆ. ತಿದ್ದುವ ಟ್ರೆಂಡ್ ಬಗ್ಗೆ ಮಾತನಾಡುತ್ತಾ, ಕನ್ನಡಲ್ಲಿ ನಟಿಸಲು ಬಂದ ಕನ್ನಡ ತಿಳಿಯದ ತೆಲುಗು ನಟ ಕೂಡಾ ಹಾಡನ್ನು ಎಡಿಟ್ ಮಾಡಲು ಮುಂದಾಗುತ್ತಾರಂತೆ.
ಕನ್ನಡದಲ್ಲಿ ಬಾಲಿವುಡ್ ಗಾಯಕರನ್ನು ಕರೆಸಿ ಹಾಡಿಸುವಲ್ಲಿಯೂ ಕನ್ನಡವನ್ನು ಕೊಲೆ ಮಾಡಲಾಗುತ್ತಿದೆ. ಇತ್ತೀಚೆಗೆ 'ಸತ್ಯ ಇನ್ ಲವ್' ಚಿತ್ರದಲ್ಲಿ 'ಸೆರೆಯಾದನು...' ಹಾಡಲ್ಲಿ ಕುಮಾರ್ ಸಾನು ಕಣ್ಣಲ್ಲೇ ಎಂದು ಹಾಡುವ ಬದಲು ಕನ್ನಲ್ಲೇ ಎಂದು ಹಾಡಿದ್ದನ್ನು ಕೂಡಾ ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತಾಪಿಸಲಾಯಿತು. ಬಾಲಿವುಡ್ ಗಾಯಕರು ಕನ್ನಡ ಹಾಡನ್ನು ಇಂಗ್ಲೀಷಲ್ಲಿ ಬರೆದು ಓದುವುದರಿಂದ ಇಂತಹ ತಪ್ಪಾಗುತ್ತದೆ. ಇದಕ್ಕೆಲ್ಲ ಮುಖ್ಯ ಕಾರಣ ತಮ್ಮ ಚಿತ್ರಕ್ಕೆ ಬಾಲಿವುಡ್ ಗಾಯಕರೇ ಬೇಕು ಎಂದು ಹಠ ಹಿಡಿಯುವ ನಿರ್ಮಾಪಕ ಹಾಗೂ ನಿರ್ದೇಶಕರು!
|