ಮಚ್ಚ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇತ್ತೀಚೆಗೆ ಸದಾಶಿವ ನಗರದಲ್ಲಿ ಮಹೇಶ್ಚಂದ್ರ ಅಲಿಯಾಸ್ ಮಚ್ಚ ಪ್ರೀತಿ ಮಾಡುವ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಯಿತು. ಇದೊಂದು ವಿಭಿನ್ನ ಚಿತ್ರ. ಇಲ್ಲಿನ ಆಕ್ಷನ್ ಸನ್ನಿವೇಶಗಳನ್ನು ವಿಶಿಷ್ಟವಾಗಿ ಚಿತ್ರೀಕರಿಸಲಾಗಿದೆ ಎನ್ನುತ್ತಾರೆ ನಿರ್ದೇಶಕ ದತ್ತು.
ಚಿತ್ರವನ್ನು 95 ದಿನ ಶೂಟಿಂಗ್ ಮಾಡಲಾಗುತ್ತಿದ್ದು, 90 ಸೀನ್‌ಗಳಿವೆ. ಇವುಗಳನ್ನು 72 ಸ್ಥಳಗಳಲ್ಲಿ ಶೂಟಿಂಗ್ ಮಾಡಲಾಗುತ್ತಿದೆಯಂತೆ. ಚಿತ್ರವನ್ನು ಮೂರೂವರೆ ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದೆ. ಇಲ್ಲಿ ಹೊಸ ಮುಖಗಳೆಂದು ಕಡಿಮೆ ಬಜೆಟ್‌ನಲ್ಲಿ ಚಿತ್ರ ನಿರ್ಮಿಸುತ್ತಿಲ್ಲ ಎಂದರು ದತ್ತು.
ಚಿತ್ರದ ಉಳಿದ ಭಾಗವನ್ನು ಹೈದರಾಬಾದ್ನಲ್ಲಿ ಚಿತ್ರೀಕರಿಸುವ ಯೋಜನೆ ಇದೆ. ಬಾಲಿವುಡ್ ಹಾಟ್‌ಬೇಬಿಯನ್ನು ಕರೆತಂದು ಒಂದು ಐಟಂ ಸಾಂಗ್ ಮಾಡಲು ಯೋಚಿಸಿದ್ದಾರಂತೆ. ಈಗಾಗಲೇ ಆ ಬೆಡಗಿಯ ಜೊತೆ ಮಾತುಕತೆ ನಡೆದಿದೆ. ಡೇಟ್ಸ್ ಹಾಗೂ ಸಂಭಾವನೆ ಹೊಂದಾಣಿಕೆಯಾದ ಮೇಲೆ ಆ ನಟಿ ಯಾರೆಂದು ಹೇಳುತ್ತೇನೆ ಎಂದ ದತ್ತು ಪತ್ರಕರ್ತರಿಗೆ ಸಣ್ಣ ಕುತೂಹಲ ಸೃಷ್ಟಿಮಾಡಿದರು.
ಚಿತ್ರದಲ್ಲಿ ಜೀವನ್ ಹಾಗೂ ಸರಿತಾ ಜೈನ್ ನಾಯಕ-ನಾಯಕಿಯಾಗಿದ್ದು, ಪೊಲೀಸ್ ಕಮೀಷನರ್ ಪಾತ್ರದಲ್ಲಿ ಅಶೋಕ್ ಖೇಣಿ ನಟಿಸಿದ್ದಾರೆ.
|