ನಟನಾಗಿ ಮಿಂಚಲಾಗಲಿಲ್ಲ. ಆದರೆ ನಿದೇಶಕನಾಗಿಯಾದರೂ ಹೆಸರು ಸಿಗಬಹುದೆಂಬ ನಿರೀಕ್ಷೆಯಿಂದ ಶಿವಧ್ವಜ್ ನಿರ್ದೇಶನಕ್ಕಿಳಿದಿದ್ದಾರೆ. ಇವರು ನಿರ್ದೇಶಿಸುತ್ತಿರುವ ನೀನೇ ನೀನೇ ಚಿತ್ರವನ್ನು ಹೇಗಾದರೂ ಮಾಡಿ ಗೆಲ್ಲಿಸಬೇಕೆಂಬ ಉತ್ಸಾಹದಿಂದ ಈ ಚಿತ್ರದ ಬಗ್ಗೆ ವಿಶಿಷ್ಟ ರೀತಿಯ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ.
ಹಿಂದೆ ಇವರು ನಾಯನಾಗಿ ನಟಿಸಿದ ಶುಭಂ ಚಿತ್ರ ಮಕಾಡೆ ಮಲಗಿತ್ತು. ಈ ಗುಂಗಿನಿಂದ ಹೊರಬರಲು ಶಿವಧ್ವಜ್ ಸಾಕಷ್ಟು ಸಮಯ ತಗೊಂಡರು. ಈಗ ನೀನೇ ನೀನೇ ಚಿತ್ರ ನಿರ್ದೇಶಿಸುವ ಮೂಲಕ ನಿರ್ದೇಶಕರಾಗಿದ್ದಾರೆ. ಇವರು ಯಾವುದೇ ಘಟನೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳಬಲ್ಲರಂತೆ. ಆದ್ದರಿಂದಲೇ ನಿರ್ದೇಶನಕ್ಕಿಳಿದೆ ಎನ್ನುತ್ತಾರೆ. ಯಾವುದೇ ಒಂದು ವಿಷಯದ ಬಗ್ಗೆ ತಾಳ್ಮೆ ಬೇಕು. ಆ ತಾಳ್ಮೆಯನ್ನು ನಾನು ಕಲಿತಿದ್ದೇನೆ ಎನ್ನುವ ಶಿವಧ್ವಜ್ ನನಗೆ ಕಾಲೇಜು ದಿನಗಳಿಂದಲೇ ಉದ್ಯಮದ ಬಗ್ಗೆ ಆಸಕ್ತಿ ಇತ್ತು ಎನ್ನುತ್ತಾರೆ.
ಶುಭಂ ಚಿತ್ರದ ಬಗ್ಗೆ ಇವರು ಭಾರೀ ನಿರೀಕ್ಷೆ ಇಟ್ಟಿದ್ದರಂತೆ. ಆದರೆ ಅದು ಉಲ್ಟಾ ಹೊಡೆದಾಗ ತೀವ್ರ ನೊಂದುಕೊಂಡರಂತೆ. ಆ ನಂತರ ಯಾವುದೇ ಒಂದು ವಿಷಯದಲ್ಲಿ ಅತಿಯಾದ ಆತ್ಮವಿಶ್ವಾಸ ಇಡಬಾರದು ಎಂಬ ಅಂಶವನ್ನು ಕಲಿತೆ ಎನ್ನುವ ಇವರು ಪದೇ ಪದೇ ಸೋತರೂ ಗೆಲ್ಲುವ ವಿಶ್ವಾಸವನ್ನು ಕಳೆದುಕೊಳ್ಳುವುದಿಲ್ಲವಂತೆ. ಸೋಲಿನಿಂದಲೇ ಪಾಠ ಕಲಿತು ಈಗ ನಿರ್ದೇಶನಕ್ಕೆ ಬಂದಿದ್ದೇನೆ ಎನ್ನುತ್ತಾರೆ.
ಇವರ ನೀನೇ ನೀನೇ ಚಿತ್ರದಲ್ಲಿ ಧ್ಯಾನ್ ನಾಯಕನಾಗಿ ನಟಿಸುತ್ತಿದ್ದಾರೆ.
|