ನಾಯಕ- ನಾಯಕಿ ಟೀ ಕುಡಿಯಲೆಂದು ಒಂದು ಟೀ ಅಂಗಡಿಗೆ ಬರುತ್ತಾರೆ. ಆದರೆ ಅಲ್ಲಿದ್ದ ಒಬ್ಬಾತ ನಾಯಕಿಗೆ ತಾನು ಟೀ ಕೊಡಿಸುವುದಾಗಿ ಹೇಳುತ್ತಾನೆ. ಇದರಿಂದ ಸಿಟ್ಟುಗೊಂಡ ನಾಯಕ ಆತನ ಜೊತೆ ಹೊಡೆದಾಟ ಮಾಡುತ್ತಾನೆ. ಇತ್ತೀಚೆಗೆ ಈ ದೃಶ್ಯವನ್ನು ಅಂಬಾರಿ ಚಿತ್ರಕ್ಕಾಗಿ ಕನಕಪುರ ರಸ್ತೆಯ ಸರ್ವತೋಪು ರಸ್ತೆ ಬಳಿ ಇರುವ ಟೀ ಅಂಗಡಿಯಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.
ಚಿತ್ರದಲ್ಲಿ ನಂದ ಲವ್ಸ್ ನಂದಿತಾದ ಯೋಗೇಶ್ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರವನ್ನು ಎ.ಪಿ. ಅರ್ಜುನ್ ನಿರ್ದೇಶಿಸುತ್ತಿದ್ದಾರೆ. ಈ ಹಿಂದಿನ ಎರಡು ಚಿತ್ರಗಳಲ್ಲೂ ಯೋಗೇಶ್ ಲಾಂಗ್, ಮಚ್ಚು ಹಿಡಿದು ಕಾಣಿಸಿಕೊಂಡಿದ್ದರೆ, ಅಂಬಾರಿಯಲ್ಲಿ ಅಂತಹ ಯಾವುದೇ ವಸ್ತುಗಳನ್ನು ಬಳಸಿಲ್ಲ. ಇಲ್ಲಿ ಬರೀ ಪ್ರೀತಿಯ ಪಯಣ ಮಾತ್ರ ಸಾಗುತ್ತದೆ.
ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನವಿರುವ ಈ ಚಿತ್ರವನ್ನು ಟಿ.ಪಿ. ಸಿದ್ಧರಾಜು ಮತ್ತು ವಿ. ಲಕ್ಷ್ಮೀಕಾಂತ್ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಸುಪ್ರೀತ ನಟಿಸುತ್ತಿದ್ದಾರೆ. ಉಳಿದಂತೆ ತಾರಾಬಳಗದಲ್ಲಿ ರಂಗಾಯಣ ರಘು, ಕಿಶೋರಿ ಬಲ್ಲಾಳ್, ಪೆಟ್ರೋಲ್ ಪ್ರಸನ್ನ, ದಿನೇಶ್ ಮಂಗಳೂರು ಇದ್ದಾರೆ.
|