ಸದ್ದಿಲ್ಲದೇ ಚಿತ್ರವೊಂದು ಮೂಡುತ್ತಿದೆ. ಅದು 'ಮಸ್ತ್ ಮಜಾ ಮಾಡಿ'. ಶಿವರಾಜ್ ಕುಮಾರ್ ಅಭಿನಯದ 'ನಂದ' ಚಿತ್ರವನ್ನು ನಿರ್ದೇಶಿಸುವ ಮೂಲಕ ಸ್ವತಂತ್ರ ನಿರ್ದೇಶಕರಾದ ಅನಂತ್ ಈಗ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆಯುತ್ತಿದೆ.
ಈಗಾಗಲೇ ಕಾಮಣ್ಣನ ಮಕ್ಕಳು ಚಿತ್ರದಲ್ಲಿ ತಮ್ಮ ಹಾಸ್ಯಾಭಿನಯ ಪ್ರದರ್ಶಿಸಿದ ಸುದೀಪ್ ಈ ಚಿತ್ರದಲ್ಲಿ ಮತ್ತೊಮ್ಮೆ ನಗಿಸಲಿದ್ದಾರೆ. ಅವರ ಜೊತೆಗೆ ವಿಜಯ ರಾಘವೇಂದ್ರ, ದಿಗಂತ್, ನಾಗಕಿರಣ್ ಹಾಗೂ ಕೋಮಲ್ ನಟಿಸುತ್ತಿದ್ದಾರೆ. ಆದರೆ ಇವರೆಲ್ಲರಿಗೂ ಒಬ್ಬಳೆ ನಾಯಕಿ. ಆಕೆ ಗ್ಲ್ಯಾಮರ್ ಬೆಡಗಿ ಜೆನ್ನಿಫರ್ ಕೊತ್ವಾಲ್. ಈ ಹಿಂದೆ ಹಿಂದಿಯಲ್ಲಿ ಒಬ್ಬ ನಾಯಕಿಗೆ ಮೂರ್ನಾಲ್ಕು ಮಂದಿ ನಾಯಕರಿರುತ್ತಿದ್ದರು. ಈಗ ಆ ಟ್ರೆಂಡ್ ಕನ್ನಡದಲ್ಲೂ ಬರುತ್ತಿದೆ.
ಕಲಾವಿದರನ್ನು ಒಟ್ಟಾಗಿ ಸೇರಿಸಿ ಹೊಸ ಪ್ರಯೋಗ ಮಾಡುತ್ತಿದ್ದೇನೆ. ಯಶಸ್ವಿಯಾಗುವ ವಿಶ್ವಾಸವಿದೆ ಎನ್ನುತ್ತಾರೆ ಅನಂತ್. ತೆಲುಗಿನ ಬಾಲಾಜಿ ಐದು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ನಾಲ್ವರು ನಿರುದ್ಯೋಗಿ ಪಡ್ಡೆ ಹುಡುಗರ ಸುತ್ತ ನಡೆಯುವ ಕಥೆಯಿದು. ಬೆಂಗಳೂರು, ಊಟಿಯಲ್ಲಿ ಚಿತ್ರೀಕರಣ ನಡೆಯಲಿದ್ದು, ಹಾಡಿನ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಹಾರುವ ಸಾಧ್ಯತೆಗಳಿವೆ.
|