'ಚಂಡ'ನ ರಾಣಿಯಾಗಿ ಮೆರೆದ ಕರಾವಳಿಯ ಬೆಡಗಿ ಶುಭಾ ಪೂಂಜಾಗೆ ನಂತರ ಮೊಗ್ಗಿನ ಮನಸ್ಸು ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಚೆಲ್ಲು ಚೆಲ್ಲು ನಗುವಿನ ಈ ಬೆಡಗಿ ಎಲ್ಲವನ್ನು ಮುಕ್ತವಾಗಿ, ನಿರ್ಭಯವಾಗಿ ಹೇಳುವ ಜಾಯಮಾನದವಳು.
ಪ್ರಸ್ತುತ ಸ್ಲಂಬಾಲಾ ಚಿತ್ರದಲ್ಲಿ ನಟಿಸಿರುವ ಈ ಬೆಡಗಿ ಇಲ್ಲಿ ತುಂಬಾ ಸೀರಿಯಸ್ ಆಗಿ ನಟಿಸಿದ್ದಾರಂತೆ. ಹಿಂದೆ ಕೇವಲ ನಟನೆ ಮಾಡುತ್ತಿದ್ದೆ. ಯಾವುದನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಆದರೆ ಈ ಚಿತ್ರದಲ್ಲಿ ಗಂಭೀರವಾಗಿ ಅಭಿನಯಿಸಿದ್ದೇನೆ ಎನ್ನುವ ಶುಭಾಳಿಗೆ ದುನಿಯಾ ವಿಜಯ್ ಸುತ್ತ ಕೆಲವು ಗಾಸಿಪ್‌ಗಳು ಎದ್ದಿದ್ದವು. ಆದರೆ ಅದನ್ನೆಲ್ಲಾ ತಳ್ಳಿಹಾಕಿರುವ ಶುಭ, ವಿಜಯ್ ನನ್ನ ಸ್ನೇಹಿತನಷ್ಟೆ ಎಂದು ತಿಳಿಸಿದ್ದಾಳೆ.
ಈಕೆಗೆ ಈಗ ಹಂಗಾಮ ಎಂಬ ಹೊಸ ಚಿತ್ರದಲ್ಲೂ ಅವಕಾಶ ಸಿಕ್ಕಿದೆ. ಸ್ಲಂಬಾಲಾ ಚಿತ್ರೀಕರಣ ಮುಗಿಯುವವರೆಗೆ ಬೇರೆ ಚಿತ್ರಗಳಲ್ಲಿ ನಟಿಸಿಬಾರೆಂದು ಚಿತ್ರದ ನಿರ್ದೇಶಕಿ ಸುಮಾನಾ ಕಿತ್ತೂರು ಹೇಳಿದರಂತೆ. ಅದಕ್ಕೆ ಈ ನಟಿ ಒಪ್ಪಿಕೊಂಡಿದ್ದಳು. ಸ್ಲಂಬಾಲಾ ಚಿತ್ರದಲ್ಲಿ ಈಕೆಗೆ ಕ್ಲಬ್ ಡ್ಯಾನ್ಸರ್ ಪಾತ್ರ. ಸದಾ ನಗುತ್ತಲೇ ಎಲ್ಲರನ್ನೂ ಮೋಡಿ ಮಾಡುವ ಬೆಡಗಿ ಉತ್ತಮ ಅವಕಾಶಗಳ ನಿರೀಕ್ಷೆಯಲ್ಲಿದ್ದಾಳೆ.
|