ತನಿಲ್ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ಪ್ರೀತಿಯ ತೇರು ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಕಳೆದ ವಾರ ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿಯಲ್ಲಿ ಮೂರು ದಿನಗಳ ಕಾಲ ಸಾಹಸ ದೃಶ್ಯವೊಂದನ್ನು ಚಿತ್ರೀಕರಿಸಲಾಗಿದೆ.
ಮಗ ತನಿಲ್‌ನನ್ನು ಸಿನಿಮಾರಂಗಕ್ಕೆ ತರುವ ನಿಟ್ಟಿನಲ್ಲಿ ನಿರ್ದೇಶಕ ಲೋಕೇಶ್ ರೆಡ್ಡಿ ಪ್ರೀತಿಯ ತೇರನ್ನು ಎಳೆದಿದ್ದಾರೆ. ನಿರ್ಮಾಣದೊಂದಿಗೆ ಚಿತ್ರದಲ್ಲಿ ಮಾರ್ಡನ್ ಸನ್ಯಾಸಿಯಾಗಿಯೂ ಲೋಕೇಶ್ ರೆಡ್ಡಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕಾಗಿ ಮುಂಬೈನಿಂದ ಮಧುಮಿತಾರನ್ನು ಕರೆಸಿಕೊಂಡಿದ್ದಾರೆ.
ದೇವರು ತೇರನ್ನು ಎಳೆದರೆ ಹೇಗೆ ಚರಿತ್ರೆಯಾಗುತ್ತದೆಯೋ, ಹಾಗೆ ಪ್ರೀತಿ ಮಾಡಿದರೆ ಚರಿತ್ರೆಯಾಗಬೇಕೆನ್ನುವ ಮಹತ್ವಾಕಾಂಕ್ಷೆಯುಳ್ಳವನು ನಾಯಕ. ಮೂರು ಕೋಟಿ ಬಜೆಟ್ ಹೊಂದಿರುವ ಚಿತ್ರ ಈಗಾಗಲೇ ಶೇ.80ರಷ್ಟು ಚಿತ್ರೀಕರಣ ನಡೆದಿದ್ದು, ಇನ್ನೊಂದು ವಾರದಲ್ಲಿ ಚಿತ್ರೀಕರಣ ಪೂರ್ಣಗೊಳ್ಳುತ್ತದೆ. ಚಿತ್ರದ ಹಾಡಿಗಾಗಿ ವಿದೇಶಕ್ಕೆ ಹಾರುವ ಯೋಜನೆಯಿದೆ.
|