ಮತ್ತೊಂದು ಚಿತ್ರದಲ್ಲಿ ಧರ್ಮ

ಬೆಂಗಳೂರು, ಸೋಮವಾರ, 24 ನವೆಂಬರ್ 2008( 16:46 IST )
ನವಗ್ರಹ ಚಿತ್ರದ ಮೂಲಕ ಬೆಳಕಿಗೆ ಬಂದ ಧರ್ಮ ಕೀರ್ತಿರಾಜ್‌ಗೆ ಈಗ ಅದೃಷ್ಟ ಒಲಿದಿದೆ. ಈಗ ಅವರು ನಾಯಕನ ಪಟ್ಟಕ್ಕೆ ಬಡ್ತಿ ಪಡೆದಿದ್ದಾರೆ. ರಾಖಿ ಚಿತ್ರದ ಮೂಲಕ ನಿರ್ದೇಶಕರಾದ ನಾಗೇಂದ್ರ ಅರಸ್ ಇದೀಗ ಮತ್ತೊಂದು ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ಈ ಚಿತ್ರಕ್ಕೆ ಧರ್ಮ ಅವರನ್ನು ಆಯ್ಕೆಯಾಗಿದ್ದಾರೆ.
ರಾಖಿಯಲ್ಲಿ ಕೆಲಸ ಮಾಡಿದ ಬಹುತೇಕ ತಜ್ಞರು ಇಲ್ಲಿಯೂ ಬರುತ್ತಾರಂತೆ. ಎಳೆಹುಡುಗನಂತೆ ಕಾಣುವ ಧರ್ಮ ತಾವು ಮಾಡಿಕೊಂಡಿರುವ ಕಥೆಗೆ ಹೊಂದಿಕೆಯಾಗುತ್ತಾರೆ ಎನ್ನುತ್ತಾರೆ ನಾಗೇಂದ್ರ. ಮೊದಲಾರ್ಧದಲ್ಲಿ ಸರಳವಾಗಿ ಕಾಣುವ ನಾಯಕ ವಿರಾಮದ ನಂತರ ಪ್ರೇಕ್ಷಕರಿಗೆ ಬೇರೆಯದೇ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ.
ಚಿತ್ರಕ್ಕೆ ಬಾಬಿ ಎಂಬ ಹೆಸರಿಡಲು ನಿರ್ಧರಿಸಿದ್ದಾರೆ. ಜನವರಿ ಎರಡನೇ ವಾರದಲ್ಲಿ ಚಿತ್ರ ಸೆಟ್ಟೇರಲಿದೆ. ನಾಗೇಂದ್ರ ಅವರ ರಾಖಿ ಚಿತ್ರ ಡಿ.2 ರಂದು ತೆರೆ ಕಾಣಲಿದೆ. ಪ್ರಚಾರ ಕಾರ್ಯ ಆರಂಭವಾಗಿದ್ದು, ಪ್ರೇಕ್ಷಕರ ಪ್ರತಿಕ್ರಿಯೆಗೆ ನಿರ್ದೇಶಕರು ಎದುರು ನೋಡುತ್ತಿದ್ದಾರೆ. ನಾಗೇಂದ್ರ ಮೂಲತಃ ಸಂಕಲನಕಾರರು. ಒಮ್ಮೆ ನಾಯಕರಾಗಿಯೂ ನಟಿಸಿದ್ದಾರೆ. ಈಗ ನಿರ್ದೇಶನದತ್ತ ವಾಲಿದ್ದಾರೆ. ಇವರ ಈ ಹೊಸ ಚಿತ್ರಕ್ಕೆ ಬಬ್ಲಿಯನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ.