ಹೊನ್ನಳ್ಳಿಯವರಿಂದ ನಗೆ ಹೂರಣ

ಮಂಗಳವಾರ, 25 ನವೆಂಬರ್ 2008( 16:10 IST )
ನಟ ಹೊನ್ನಳ್ಳಿ ಕೃಷ್ಣ ನಟಿಸಿದ 'ಮೂರನೇ ಕ್ಲಾಸ್ ಮಂಜನ ಬಿಕಾಂ ಭಾಗ್ಯ' ಚಿತ್ರದ ಬಗ್ಗೆ ವಿಶ್ವಾಸದಿಂದ ಎದುರು ನೋಡುತ್ತಿದ್ದಾರೆ. ಬಹು ಕಾಲದ ನಂತರ ತಮಗೆ ವಿಶಿಷ್ಟ ಪಾತ್ರವೊಂದು ಸಿಕ್ಕಿದೆ ಎನ್ನುವುದು ಅವರ ಖುಷಿಗೆ ಕಾರಣ. ಚಿತ್ರದಲ್ಲಿ ಅವರು ನಾಯಕನ ಸೋದರಮಾವ.
ಚಿತ್ರ ನೋಡಿದ ಪ್ರೇಕ್ಷಕರು ಖಂಡಿತವಾಗಿಯೂ ತಮ್ಮ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆನ್ನುವುದು ಅವರ ವಿಶ್ವಾಸ. ಹಾಸ್ಯ ಪಾತ್ರಗಳ ಏಕತಾನತೆಯಿಂದ ಅವರು ಖಂಡಿತವಾಗಿಯೂ ಬೇಸರಗೊಂಡಿಲ್ಲ. ಕಿರುತೆರೆಯಲ್ಲಿನ ಗಂಭೀರ ಪಾತ್ರಗಳು ಈ ಏಕತಾನತೆಯನ್ನು ಮರೆಮಾಚುತ್ತವೆ ಎನ್ನುವ ಹೊನ್ನಳ್ಳಿ 'ಓಂಕಾರ' ಮತ್ತು 'ಹಸೆಮಣೆ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಹೊನ್ನಳ್ಳಿಯವರು 'ಯೋಗಿ' ಚಿತ್ರದಲ್ಲೂ ನಟಿಸುತ್ತಿದ್ದಾರೆ. ಇದಕ್ಕೂ ಮುನ್ನ 'ಅಳಿಯ ಗೆಳೆಯ' 'ಬ್ರಹ್ಮಚಾರಿ' ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಅವರ 'ನಗೆ ನೂರು ಬಗೆ' ನಗೆ ತಂಡ ಈಗ 250 ಕಾರ್ಯಕ್ರಮಗಳ ಗಡಿಯಲ್ಲಿದೆ. ಸದ್ಯ ಅವರೊಂದಿಗೆ 12 ಮಂದಿ ಕಲಾವಿದರಿದ್ದಾರೆ. ನೂರಾರು ಚಿತ್ರಗಳಲ್ಲಿ ನಟಿಸಿದರೂ, ಜನರನ್ನು ನೇರವಾಗಿ ಮುಖಾಮುಖಿಯಾಗುವ ಲೈವ್ ಷೋಗಳೆ ತಮಗೆ ಇಷ್ಟ ಎನ್ನುತ್ತಾರೆ ಹೊನ್ನಳ್ಳಿ.