ಮುಂಗಾರು ಮಳೆ ಸುರಿಸಿ ಮೊಗ್ಗಿನ ಮನಸು ಅರಳಿಸಿದ ನಿರ್ಮಾಪಕ ಇ.ಕೃಷ್ಣಪ್ಪ ಈಗ ಮತ್ತೊಂದು ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ. ಇದು ಅವರ ಬ್ಯಾನರ್‌ನ ಮೂರನೇ ಚಿತ್ರವಾಗಲಿದೆ. ಅಂದಹಾಗೆ ಪತ್ರಕರ್ತ ಸದಾಶಿವ ಶೆಣೈ ನಿರ್ದೇಶನದ ಮಾತೃಭೂಮಿ ಚಿತ್ರ ಮೂರನೇ ಚಿತ್ರವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ಚಿತ್ರ ಮುಂದಕ್ಕೆ ಹೋಗಿದೆ.
ಈಗ ದಿನೇಶ್ ನಿರ್ದೇಶನದಲ್ಲಿ ಸಂಪೂರ್ಣ ಹಾಸ್ಯ ಚಿತ್ರವೊಂದು ನಿರ್ಮಿಸಲು ಕೃಷ್ಣಪ್ಪ ಮುಂದಾಗಿದ್ದಾರೆ. ಹಾಸ್ಯ ಚಿತ್ರ ನಿರ್ಮಿಸುವುದರಲ್ಲಿ ದಿನೇಶ್‌ಬಾಬು ಎತ್ತಿದ ಕೈ ಎನ್ನುವುದಕ್ಕೆ ಅವರ್ 'ಮಿಸ್ಟರ್ ಗರಗಸ' ಚಿತ್ರವೇ ಸಾಕ್ಷಿ. ಈ ಚಿತ್ರವನ್ನು 9 ದಿನದಲ್ಲಿ ಮುಗಿಸಿದ್ದರು. ಆದರೆ ಈಗ ಕೃಷ್ಣಪ್ಪನವರ ಚಿತ್ರವನ್ನು 10 ದಿನದಲ್ಲಿ ಮುಗಿಸಲು ನಿರ್ಧರಿಸಿದ್ದಾರೆ.
ಈಗಾಗಲೇ ರಮೇಶ್ ಹಾಗೂ ಶರಣ್ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ನಾಯಕಿಯರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಎಲ್ಲವೂ ಸರಿ ಹೋದರೆ ಡಿಸೆಂಬರ್ ಎರಡನೇ ವಾರ ಚಿತ್ರ ಸೆಟ್ಟೇರಲಿದೆ.
ಈಗಾಗಲೇ ದಿನೇಶ್ ಬಾಬು ಅವರ 'ಜನುಮ ಜನುದಲ್ಲೂ' ಹಾಗೂ 'ಜನುಮದ ಗೆಳತಿ' ತೆರೆಗೆ ಸಿದ್ದವಾಗಿದ್ದು, ವಿಷ್ಣುವರ್ಧನ್, ಸುಹಾಸಿನಿ ಕಾಂಬಿನೇಶನ್‌ನಲ್ಲಿ 'ಸ್ಕೂಲ್ ಮಾಸ್ಟರ್'ಗೆ ನಿರ್ದೇಶನ ನೀಡುವುದರಲ್ಲಿ ತೊಡಗಿದ್ದಾರೆ. ಕೃಷ್ಣಪ್ಪನವರ ಬ್ಯಾನರಿನ ಹಾಸ್ಯ ಚಿತ್ರ ಶತಕ ಬಾರಿಸುತ್ತದಾ ಎಂದು ಕಾದು ನೋಡಬೇಕು.