ಪ್ರೀತಿ ನೀ ಹೀಗೇಕೆ....

ಬುಧವಾರ, 26 ನವೆಂಬರ್ 2008( 18:13 IST )
ದಶಕಗಳ ಹಿಂದೆ ಹಿಂದಿಯಲ್ಲಿ ಬಂದ 'ಸಾಜನ್' ಚಿತ್ರ ಸಂಜಯ್ ದತ್‌ಗೆ ದೊಡ್ಡ ಯಶಸ್ಸನ್ನೇ ತಂದು ಕೊಟ್ಟಿತು. ಈಗ ಅದರದ್ದೇ ಎಳೆಯನ್ನಿಟ್ಟುಕೊಂಡ ಕನ್ನಡದಲ್ಲಿ 'ಪ್ರೀತಿ ನೀ ಹೀಗೇಕೆ' ಎಂಬ ಚಿತ್ರ ಬರುತ್ತಿದೆ. ಈ ಚಿತ್ರಕ್ಕೆ ಇಬ್ಬರು ನಿರ್ದೇಶಕರು ದುಡಿದಿದ್ದಾರೆ. ಆರಂಭದಲ್ಲಿ ನಿರ್ದೇಶನದ ಹೊಣೆ ಹೊತ್ತಿದ್ದ ವಸಂತ್ ಕಾರಣಾಂತರಗಳಿಂದ ಹೊರಬಂದರು. ನಂತರ ಅದರ ಹೊಣೆ ಸುರೇಶ್ ಹಾನಗಲ್ ಅವರ ಮೇಲೆ ಬಿತ್ತು.
'ಪ್ರೀತಿ ನೀ ಹೀಗೇಕೆ' ಕಾಲೇಜು ಕ್ಯಾಂಪಸ್‌ನ ಕಥೆ. ತ್ರಿಕೋನ ಪ್ರೇಮಕಥೆ ಚಿತ್ರದಲ್ಲಿದೆ. ''ಹಿಂದಿಯ ಸಾಜನ್ ಕಥೆಯೇ ನಮಗೆ ಸ್ಪೂರ್ತಿ. ಅದೇ ಕಥೆಯನ್ನು ಕನ್ನಡದ ನೇಟಿವಿಟಿಗೆ ಹೊಂದುವಂತೆ ಚಿತ್ರ ಮಾಡಿದ್ದಾರೆ. ಚಿತ್ರಕ್ಕೆ ಸೆನ್ಸಾರ್‌ನಿಂದ ಯು ಸರ್ಟಿಫಿಕೇಟ್ ಕೂಡಾ ಸಿಕ್ಕಿದೆ. ಮುಂದಿನ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡಲು ಯೋಚಿಸುತ್ತಿದ್ದೇವೆ'' ಎಂದು ಚಿತ್ರದ ನಿರ್ಮಾಪಕರಲ್ಲೊಬ್ಬರಾದ ನಾರಾಯಣ್ ಹೇಳಿದರು.
ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ಪುಷ್ಪಗಿರಿಯಲ್ಲಿ ನಡೆದಿದೆ. ಐದು ಹಾಡುಗಳನ್ನು ಕೂಡಾ ಅಲ್ಲೇ ಚಿತ್ರಿಕರಿಸಲಾಗಿದೆ. ಒಂದು ಹಾಡನ್ನು ಹೊಗೇನಕಲ್‌ನಲ್ಲಿ ಚಿತ್ರಿಕರಿಸಲಾಗಿದೆ. ಡ್ರಮ್ಮರ್ ದೇವ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ವಿವೇಕ್ ಹಾಗೂ ತೇಜಸ್ವಿನಿ ನಟಿಸುತ್ತಿದ್ದಾರೆ. ಐಟಂ ಹಾಡಿನಲ್ಲಿ ಸೀಮಾ ಕುಣಿದಿದ್ದಾರೆ.