'ಮರುಜನ್ಮ' ಚಿತ್ರದ ಮೂಲಕ ಬೆಳಕಿಗೆ ಬಂದ ನಾಗಕಿರಣ್‌ಗೆ ಈಗ ಒಂದೊಂದೇ ಅವಕಾಶಗಳು ಸಿಗುತ್ತಿವೆ. ಅವರು ನಟಿಸಿದ ವಸಂತಕಾಲ ಚಿತ್ರ ಮಕಾಡೆ ಮಲಗಿದರೂ ಅವರಿಗೆ ಅವಕಾಶಗಳು ಕಡಿಮೆಯಾಗಿಲ್ಲ. ವಿಜಯಲಕ್ಷ್ಮೀ ಸಿಂಗ್ ನಿರ್ದೇಶನದ 'ಮಳೆ ಬರಲಿ ಮಂಜೂ ಇರಲಿ' ಚಿತ್ರದಲ್ಲೂ ಇವರು ನಟಿಸಿದ್ದಾರೆ.
ಈ ನಡುವೆ ಅನಂತರಾಜು ನಿರ್ದೇಶನದ ಈ ವಾರ ತೆರೆ ಕಾಣಲಿರುವ ಹಾಸ್ಯ ಚಿತ್ರ 'ಮಸ್ತ್ ಮಜಾ ಮಾಡಿ' ಚಿತ್ರದಲ್ಲೂ ಇವರು ನಟಿಸಿದ್ದಾರೆ. 'ಪಲ್ಲವಿ ಇಲ್ಲದ ಚರಣ' ಇನ್ನೂ ಬಿಡುಗಡೆಗೊಂಡಿಲ್ಲ. ಈಗ 'ಧರಣಿ' ಎಂಬ ಮತ್ತೊಂದು ಹೊಸ ಚಿತ್ರಕ್ಕೆ ನಾಗಕಿರಣ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಚಿತ್ರವನ್ನು 'ತಬ್ಬಲಿ' ಚಿತ್ರ ನಿರ್ದೇಶಿಸಿದ ಲೋಕಿ ನಿರ್ದೇಶಿಸುತ್ತಿದ್ದಾರೆ. ತಮ್ಮ ಚೊಚ್ಚಲ ಚಿತ್ರ ಬಿಡುಗಡೆಗೆ ಮೊದಲೇ ಇವರು ಮತ್ತೊಂದು ಚಿತ್ರಕ್ಕೆ ಕೈ ಹಾಕಿದ್ದಾರೆ.
ಧರಣಿ ಚಿತ್ರಕ್ಕೆ ಇವರೇ ಸ್ವತಃ ಚಿತ್ರಕಥೆ ಬರೆದಿದ್ದಾರೆ. ನೀಲ್ ಸಂಗೀತ, ಕೃಷ್ಣಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. ನಾಯಕಿಯರ ಹುಡುಕಾಟದಲ್ಲಿದ್ದಾರೆ. ಮೊದಲು ಬಂದ ಕನ್ನಡದ ನಾಯಕಿಯರಿಗೆ ಆದ್ಯತೆಯಂತೆ. ಯಾರು ಬರುತ್ತಾರೋ ಕಾದು ನೋಡಬೇಕು.