ಗಾಂಧಿನಗರದಲ್ಲಿ ಒಂದಲ್ಲ ಒಂದು ಸದ್ದು-ಗದ್ದಲ ಅಥವಾ ವಾದ-ವಿವಾದಗಳು ನಡೆಯುತ್ತಲೇ ಇರುತ್ತದೆ. ಮೊನ್ನೆ ತಾನೇ ಕತೆ ಕಳವಿನ ಬಗ್ಗೆ ನಿರ್ದೇಶಕ ಮಹೇಂಧರ್ ಹಾಗೂ 'ಸರ್ಕಸ್' ಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕರಾದ ದಯಾಳ್ ನಡುವೆ ವಾದ-ವಿವಾದ ಏರ್ಪಟ್ಟು ಕೊನೆಗೆ ಇದರಲ್ಲಿ ಮಹೇಂದರ್‌ಗೆ ಜಯ ಸಿಕ್ಕಿತು.
ಈಗ ಅದರ ಮುಂದುವರಿದ ಭಾಗ ಮತ್ತೆ ಗಾಂಧಿನಗರದಲ್ಲಿ ಪ್ರದರ್ಶಿತವಾಗುತ್ತಿದೆ. ಆದರೆ ಈ ಬಾರಿ ಪಾತ್ರಧಾರಿಗಳು ಮಾತ್ರ ಬೇರೆ. ಅವರು ತಾಜ್‌ಮಹಲ್ ನಿರ್ದೇಶಕ ಚಂದ್ರು ಹಾಗೂ ಹಿಂದೊಮ್ಮೆ ಅವರ ಸ್ನೇಹಿತನಾಗಿದ್ದ ರಘು. ಚಂದ್ರು ಈಗ ಮಾಡುತ್ತಿರುವ 'ಪ್ರೇಮ್ ಕಹಾನಿ' ಚಿತ್ರದ ಕಥೆ ತಮ್ಮದೆಂದು ಹೇಳುವ ರಘು ಈ ಬಗ್ಗೆ ನಾಳೆ ಚಿತ್ರಮಂಡಳಿಗೆ ದೂರು ನೀಡಲಿದ್ದಾರಂತೆ.
ಆದರೆ ಈ ಬಗ್ಗೆ ಚಂದ್ರುವನ್ನು ಪ್ರಶ್ನಿಸಿದರೆ, ನನಗೆ ಒಬ್ಬ ಮೇಕಪ್ ಮ್ಯಾನ್ ಆಗಿದ್ದವನಿಂದ ಕಥೆ ಕದಿಯುವ ಅಗತ್ಯವಿಲ್ಲ. ನಾನು ಮೂಲತಃ ಬರಹಗಾರ. ಅನೇಕ ಕಥೆ, ಕಾದಂಬರಿಗಳನ್ನು ಬರೆದಿದ್ದೇನೆ. ನನಗೆ ಯಾವುದಾದರೂ ಕಥೆ ಹೊಳೆದರೆ ಅದನ್ನು ಮತ್ತೊಬ್ಬರಿಗೆ ಹೇಳುವ ಬುದ್ದಿ ಜಾಸ್ತಿ. ಈ ಕಥೆ ಪ್ರೇಮ್ ಕಹಾನಿ ಚಿತ್ರದ ಕಥೆ ಮೂರು ವರ್ಷದ ಹಿಂದೆಯೇ ನನ್ನ ತಲೆಯಲ್ಲಿತ್ತು. ಇದನ್ನು ತಾಜ್‌ಮಹಲ್ ಮುಂಚೆಯೇ 'ಉರಿಬಿಸಿಲು' ಎಂಬ ಟೈಟಲ್‌ನಡಿ ಮಾಡಬೇಕಿತ್ತು. ಆದರೆ ಸುನೀಲ್ ರಾವ್ ಕಾಲ್ಶೀಟ್ ಸಿಗದಿದ್ದರಿಂದ ಅದು ಸಾಧ್ಯವಾಗದೇ ತಾಜ್‌ಮಹಲ್ ಮಾಡಿದೆ. ಒಂದು ಈ ವೇಳೆ ಈ ಆರೋಪ ಸಾಬೀತಾದರೆ ನಾನು ಒಂದು ಲಕ್ಷ ರೂಪಾಯಿ ದಂಡ ಕಟ್ಟಿ ಉದ್ಯಮವನ್ನೇ ಬಿಟ್ಟು ಹೋಗುತ್ತೇನೆ. ಸುಳ್ಳಾದರೆ ರಘು ಬಿಟ್ಟು ಹೋಗಲಿ ಎಂದಿದ್ದಾರೆ.
ಆದರೆ ರಘು ಪ್ರಕಾರ ಈ ಕಥೆ ಅವರಲ್ಲಿ ಎರಡು ವರ್ಷದ ಹಿಂದೆಯೇ ಇತ್ತಂತೆ. ಇದನ್ನು ಕಾದಂಬರಿ ಮಾಡಿ 'ಸೂರ್ಯ ಸಾಯುವ ಮೊದಲು' ಎಂಬ ಹೆಸರಿನಲ್ಲಿ ಕಬ್ಬನ್ ಪಾರ್ಕ್ ಗ್ರಂಥಾಲಯದಲ್ಲಿ ನೋಂದಾಯಿಸಿದ್ದಾರಂತೆ.
ಒಟ್ಟಾರೆ ಈ ಜಿದ್ದಾಜಿದ್ದಿಯಲ್ಲಿ ಯಾರಿಗೆ ಜಯ ಸಿಗುತ್ತೊ ಕಾದು ನೋಡಬೇಕು.