ದೀಪಕ್ ಅಭಿನಯದ ದೀನ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಚಿತ್ರದ ಪ್ರಮೋಗಳು ಜನರಲ್ಲಿ ಆಸಕ್ತಿ ಮೂಡಿಸುತ್ತಿವೆ. ಈ ಹಿಂದೆ ದೀಪಕ್ ಅಭಿನಯಿಸಿದ ಶಿಷ್ಯ ಚಿತ್ರದ ನಂತರ ಉಳಿದ ಚಿತ್ರಗಳೆಲ್ಲ ಮಕಾಡೆ ಮಲಗಿವೆ. ಈಗ ಈ ಚಿತ್ರದ ಯಶಸ್ಸಿನ ನಿರೀಕ್ಷೆಯಲ್ಲಿ ದೀಪಕ್ ಎದುರು ನೋಡುತ್ತಿದ್ದಾರೆ. ಈ ಚಿತ್ರದ ನಿರ್ದೇಶಕ ಸಹನಾ ಕೂಡಾ ಚಿತ್ರರಂಗಕ್ಕೆ ಹೊಸಬರು.
ಚಿತ್ರದಲ್ಲಿ ಕಥೆ ಸಾಮಾನ್ಯವಾಗಿರಬಹುದು. ಆದರೆ ಅದರ ನಿರೂಪಣೆಯಲ್ಲಿ ಹೊಸತನವಿದೆ. ಅದನ್ನು ಈಗಾಗಲೇ ಪ್ರಮೋಸ್‌ಗಳು ಸಾರಿ ಹೇಳುತ್ತಿವೆ ಎನ್ನುತ್ತಾರೆ ನಿರ್ದೇಶಕ ಸಹನಾ. ಆರ್ಥಿಕವಾಗಿ ಬಡವನಾದವನು ಮಾತ್ರ ಬಡವನಲ್ಲ. ಸ್ನೇಹ ಪ್ರಿತಿ ವಿಶ್ವಾಸಗಳ ಕೊರತೆ ಅನುಭವಿಸುವವನು ಕೂಡಾ ಭಾವನಾತ್ಮಕವಾಗಿ ಬಡವನಾಗಿರುತ್ತಾನೆ ಎಂಬುದು ಚಿತ್ರದ ಹೈಲೈಟ್.
ಚಿತ್ರರಂಗಕ್ಕೆ ಬಂದ ಮೊದಲಿಗೆ ನಾನು ಎ.ಆರ್.ಬಾಬು ಅವರೊಂದಿಗೆ ಸಹಾಯಕನಾಗಿ ಕೆಲಸ ಮಾಡಿದೆ. ಈ ಕ್ಷೇತ್ರದಲ್ಲಿ ಒಂದಿಷ್ಟು ಅನುಭವ ಆದ ಮೇಲೆ ಸ್ವತಂತ್ರವಾಗಿ ದೀನ ಚಿತ್ರ ಕೈಗೆತ್ತಿಕೊಂಡೆ. ಜನವರಿ 2 ರಂದು ಚಿತ್ರ ಬಿಡುಗಡೆಯಾಗಲಿದೆ. ಕನ್ನಡ ಚಿತ್ರರಂಗದಲ್ಲಿ ಉತ್ತಮ ಸಿನಿಮಾ ಮಾಡುವುದು ನನ್ನ ಗುರಿ ಎನ್ನುವ ಇವರಿಗೆ ಗೆಳೆಯರೇ ಗಾಡ್ ಫಾದರ್ಸ್ ಅಂತೆ.