ತಮ್ಮ ಮಗನನ್ನು ನಾಯಕನನ್ನಾಗಿಸಲು ಹೋಗಿ ಚೈತ್ರದ ಚಂದ್ರಮ ಚಿತ್ರದಲ್ಲಿ ಕೈ ಸುಟ್ಟುಕೊಂಡ ನಿರ್ದೇಶಕ ಎಸ್.ನಾರಾಯಣ್ ಈಗ ಮತ್ತೊಂದು ಚಿತ್ರಕ್ಕೆ ಸಿದ್ಧರಾಗಿದ್ದಾರೆ. ಅವರ ಹೊಸ ಚಿತ್ರಕ್ಕೆ ಡಿ.10 ರಿಂದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರಕ್ಕೆ ಇನ್ನೂ ಟೈಟಲ್ ಫೈನಲ್ ಆಗಿಲ್ಲ. ಒಂದು ಮೂಲದ ಪ್ರಕಾರ, ಚೆಲ್ಲಿದರು ಸಂಪಿಗೆಯ ಎಂದು ಹೆಸರಿಡಲಾಗಿದೆ.
ಈ ಬಾರಿ ತಮ್ಮ ಚಿತ್ರಕ್ಕೆ ಒರಟ ಚಿತ್ರದ ಪ್ರಶಾಂತ್‌ರನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. ಈ ಬಾರಿ ಪ್ರಶಾಂತ್ ಅದೃಷ್ಟವೂ ಚೆನ್ನಾಗಿದೆ. ಒರಟ ಚಿತ್ರದ ನಂತರ ಬಿಡುಗಡೆಯಾದ ಮಹರ್ಷಿ ಚಿತ್ರ ಸದ್ದು ಮಾಡಲಿಲ್ಲ. ಈ ನಡುವೆ ಅವರು ವೆಂಕಿ ಹಾಗೂ ಅಂಜದಿರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗ ಎಸ್.ನಾರಾಯಣ್ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ.
ಚಿತ್ರಕ್ಕೆ ನಾಯಕಿ ಇನ್ನೂ ಆಯ್ಕೆಯಾಗಿಲ್ಲ. ಚಿತ್ರದ ಉಳಿದ ತಂತ್ರಜ್ಞರ ಬಗ್ಗೆಯೂ ನಾರಾಯಣ್ ತುಟಿ ಬಿಚ್ಚಿಲ್ಲ. ಈ ನಡುವೆ ಜಗ್ಗೇಶ್ ಹಾಗೂ ನಾರಾಯಣ್ ಅಭಿನಯದ ಚಿಕ್ಕಪೇಟೆ ಸಾಚಾಗಳು ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಚೆಲುವಿನ ಚಿತ್ತಾರದ ಬಂಪರ್ ಹಿಟ್ ಹಾಗೂ ಚಂಡದ ಸಾಧಾರಣದ ಹಿಟ್‌ನ ಹುಮ್ಮಸ್ಸಿನಿಂದ ನಿರ್ದೇಶಿಸಿದ ಚೈತ್ರದ ಚಂದ್ರಮ ಬೋರಲು ಬಿದ್ದಿದೆ. ಈಗ ಹೊಸ ಚಿತ್ರ ಏನಾಗುತ್ತದೆ ಕಾದು ನೋಡಬೇಕು.