ಲಗೋರಿ ಪಂದ್ಯ ನಡೆಯುವುದು ಯಾಕೋ ಸ್ವಲ್ಪ ಡೌಟ್. ಪಂದ್ಯದ ಸಂಯೋಜಕರು ಅದಕ್ಕೆ ಬೇಕಾದ ಅಗತ್ಯ ಅನುದಾನ ಒದಗಿಸುವುದರಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ವಿಷಯ ಪಂದ್ಯ ಕುತೂಹಲಿಗಳಿಗೆ ನಿರಾಶೆಯಾಗಬಹುದು. ಆದರೆ ಲಗೋರಿ ಪಂದ್ಯ ರದ್ದಾಗುವುದು ಇನ್ನೂ ಖಚಿತವಾಗಿಲ್ಲ.
ಬಹುಶ: ನಿಮಗೆ ವಿಷಯ ಏನೆಂದು ಅರ್ಥವಾಗಿರಬಹುದು. ಯಸ್, ನಿಮ್ಮ ಊಹೆ ಸರಿ. ಯೋಗರಾಜ ಭಟ್ ಅವರ ನಿರ್ದೇಶನದ ಲಗೋರಿ ಪ್ರಾಜೆಕ್ಟ್ ಡ್ರಾಪ್ ಆಗುವ ಬಗ್ಗೆ ಗಾಂಧಿನಗರದಲ್ಲಿ ಮಾತುಗಳು ಕೇಳಿಬರುತ್ತಿವೆ. ಯೋಗರಾಜ್ ಚಿತ್ರಕ್ಕೆ ಈಗಾಗಲೇ ಸ್ಕ್ರಿಪ್ಟ್ ಸಿದ್ಧಪಡಿಸಿದ್ದಾರೆ. ಆದರೆ ಬಜೆಟ್ ಬಗ್ಗೆ ಮಾತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.
ಪುನೀತ್ ನಾಯಕರಾಗಿರುವ ಈ ಚಿತ್ರಕ್ಕೆ ಅಮೆರಿಕ ಸೇರಿದಂತೆ ಇತರ ಕಡೆ ಚಿತ್ರೀಕರಣ ಮಾಡಲು ಯೋಗರಾಜ್ ನಿರ್ಧರಿಸಿದ್ದರು. ಒಟ್ಟಾಗಿ ಚಿತ್ರವನ್ನು ಅದ್ದೂರಿಯಾಗಿ ತರಬೇಕೆಂದು ಅವರು ಯೋಚಿಸಿ ಸುಮಾರು 15 ಕೋಟಿ ರೂ.ಗಳ ಬಜೆಟ್ ಪಟ್ಟಿಯನ್ನು ರಾಕ್‌ಲೈನ್ ಮುಂದಿಟ್ಟಿದ್ದಾರೆ. ಆದರೆ ಅಷ್ಟೊಂದು ದೊಡ್ಡ ಬಜೆಟ್ ಕಂಡು ರಾಕ್‌ಲೈನ್ ವೆಂಕಟೇಶ್ ಚಿತ್ರವನ್ನು ಡ್ರಾಪ್ ಮಾಡುವ ಯೋಚನೆಯಲ್ಲಿದ್ದಾರಂತೆ.
ಕನ್ನಡದಲ್ಲಿ 15 ಕೋಟಿ ರೂ.ಬಜೆಟ್‌ನ ಚಿತ್ರ ಮಾಡಿದರೆ ಅದರ ಲಾಭ ಬರಬಹುದೇ ಎಂಬ ಲೆಕ್ಕಾಚಾರ ರಾಕ್‌ಲೈನ್ ಅವರನ್ನು ಕಾಡುತ್ತಿದೆಯಂತೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಗಾಂಧಿನಗರದ ಅಂತೆ-ಕಂತೆಗಳ ಸುಳಿವಿನಲ್ಲಿ ಮಾತ್ರ ಇದು ಸುತ್ತಾಡುತ್ತಿದೆ.