ನಿರ್ದೇಶಕ ಗುರುಪ್ರಸಾದ್ ಏನನ್ನು ನೇರವಾಗಿ ಕೇಳುವ ಹೇಳುವ ವ್ಯಕ್ತಿ. ಪ್ರಶಸ್ತಿ ಕೇಳುವುದಕ್ಕೆ ನನಗೂ ಹಕ್ಕಿದೆ ಎಂದು ನೇರವಾಗಿ ಹೇಳಿಯೇ ಬಿಟ್ಟರು. ಅವರು ನಿರ್ದೇಶಿಸಿದ ಮಠ ಚಿತ್ರಕ್ಕೆ ಪ್ರಶಸ್ತಿ ಬರಬಹುದೆಂದು ನಿರೀಕ್ಷಿಸಿದ್ದರು. ಆದರೆ ಆ ಚಿತ್ರಕ್ಕೆ ಜಗ್ಗೇಶ್‌ಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಬಂದಿತ್ತು. ಆದರೆ ಜಗ್ಗೇಶ್ ಅದನ್ನು ನಯವಾಗಿಯೇ ನಿರಾಕರಿಸಿದರು.
ಈಗ ಎದ್ದೇಳು ಮಂಜುನಾಥ ಚಿತ್ರ ಮಾಡಿ ಪ್ರಶಸ್ತಿ ನಿರೀಕ್ಷೆಯಲ್ಲಿದ್ದಾರೆ. ನಾನು ಯಾವುದೋ ಚಿತ್ರಗಳಿಂದ ದೃಶ್ಯಗಳನ್ನು ಕದ್ದು ಚಿತ್ರ ಮಾಡುವವನಲ್ಲ. ಕಷ್ಟಪಡುತ್ತೇನೆ. ಕಾರ್ಪೊ ರೇಟ್ ಕ್ಷೇತ್ರದಲ್ಲಿ ದಿನಕ್ಕೆ 16 ಗಂಟೆ ಕೆಲಸ ತೆಗೆಸುತ್ತಾರೆ. ಆದರೆ ಅದಕ್ಕೆ ಸರಿಯಾಗಿ ಪ್ರಮೋಷನ್ ಕೂಡಾ ಕೊಡುತ್ತಾರೆ. ಅದೇ ರೀತಿ ಕಷ್ಟಪಟ್ಟು ಮಾಡಿದ ಚಿತ್ರಕ್ಕೆ ಪ್ರಶಸ್ತಿ ಕೊಡಿ ಅಂತಷ್ಟೇ ಕೇಳುತ್ತಿದ್ದೇನೆ ಎನ್ನುತ್ತಾರೆ ಗುರು.
ಪ್ರಶಸ್ತಿ ಮುಖ್ಯವಲ್ಲ. ಜನರಿಂದ ಒಳ್ಳೆಯ ಪ್ರೋತ್ಸಾಹ ಪಡೆದ ಚಿತ್ರಗಳಿಗೆ ಸರಕಾರದಿಂದಲೂ ಬೆಂಬಲ ಸಿಕ್ಕಿದಾಗ ಇನ್ನಷ್ಟು ಉತ್ತೇಜನ ದೊರೆತಂತಾಗುತ್ತದೆ. ಏನೋ ಸಾಧನೆ ಮಾಡಿದ ಮಗನನ್ನು ಎಲ್ಲರು ಮೆಚ್ಚಿಕೊಳ್ಳುತ್ತಾರೆ. ಆದರೆ ಅಪ್ಪ ಮೆಚ್ಚಿಕೊಂಡಾಗ ಆಗುವ ಸಂತಸವೇ ಬೇರೆ ಎಂದು ತಮ್ಮ ಪ್ರಶಸ್ತಿ ಹಂಬಲದ ಬಗ್ಗೆ ವಿವರಿಸುತ್ತಾರೆ.