ಕನ್ನಡ ಚಿತ್ರರಂಗದಲ್ಲಿ ಡಾಕ್ಟರ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಹಾಗಾಂತ ಇವರೆಲ್ಲ ವೈದ್ಯಕೀಯ ಕೋರ್ಸ್ ಮಾಡಿ ಡಾಕ್ಟರೇಟ್ ಪಡೆದವರಲ್ಲ. ಬದಲಾಗಿ ಇವರ ಸಾಧನೆಯನ್ನು ಗುರುತಿಸಿ ವಿಶ್ವವಿದ್ಯಾಲಯಗಳು ಡಾಕ್ಟರೇಟ್ ನೀಡುವ ಮೂಲಕ ಡಾಕ್ಟರ್‌ಗಳಾದವರು. ಈಗ ಈ ಸಾಲಿಗೆ ಸೇರ್ಪಡೆ ಕನ್ನಡದ ಹಿರಿಯ ನಟಿ ಲೀಲಾವತಿ.
ಕನ್ನಡ ಚಿತ್ರರಂಗಕ್ಕೆ ಇವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ತುಮಕೂರು ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿದೆ. ಜನವರಿ 9ರಂದು ನಡೆಯುವ ವಿವಿ ಘಟಿಕೋತ್ಸವದಲ್ಲಿ ಪದವಿ ಪ್ರದಾನವಾಗಲಿದೆ. ಕನ್ನಡ ಚಿತ್ರರಂಗದಲ್ಲಿ ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್, ಡಾ.ಬಿ.ಸರೋಜಾದೇವಿ, ಡಾ.ಜಯಮಾಲಾ, ಡಾ.ಕೆ.ಎಸ್.ಅಶ್ವಥ್ ಹಾಗೂ ಡಾ.ಲೀಲಾವತಿ ಹೀಗೆ ಒಟ್ಟು ಆರು ಮಂದಿ ಡಾಕ್ಟರೇಟ್ ಪಡೆದವರು.
ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದರಿಂದಲೇ ನನಗೆ ಡಾಕ್ಟರೇಟ್ ಬಂದಿದೆ. ಪ್ರೇಕ್ಷಕರು ನನ್ನ ಅಭಿನಯ ಮೆಚ್ಚಿ ಪ್ರೋತ್ಸಾಹಿಸಿದ್ದರಿಂದಲೇ ಇಂದು ಈ ಪದವಿ ದೊರಕಲು ಸಾದ್ಯವಾಯಿತು. ವಿವಿಗೆ ಹಾಗೂ ಕನ್ನಡಾಭಿಮಾನಿಗಳಿಗೆ ವಂದನೆ ಸಲ್ಲಿಸುತ್ತೇನೆ. ನನಗೆ ಎಲ್ಲವನ್ನು ನೀಡಿದ ಕನ್ನಡ ಜನತೆಯ ಋಣವನ್ನು ಹೇಗೆ ತಿರಿಸಲಿ ಎನ್ನುತ್ತಾರೆ ಡಾ.ಲೀಲಾವತಿ. ಒಟ್ಟಾರೆ ಕನ್ನಡ ಚಿತ್ರರಂಗದ ಸಾಧನೆಯನ್ನು ಪ್ರತಿ ಕ್ಷೇತ್ರ ಗುರುತಿಸುತ್ತಿದೆ ಎನ್ನುವುದೇ ಸಂತಸದ ವಿಷಯ.