ಏಳು ಅದ್ಬುತಗಳೊಂದಾದರೆ..

ವಿಶ್ವದ ಏಳು ಅದ್ಬುತಗಳನ್ನು ಒಟ್ಟಿಗೆ ತೋರಿಸುವ ಚೆಲುವೆಯೇ ನಿನ್ನ ನೋಡಲು ಚಿತ್ರ ಸೆಟ್ಟೇರಿದೆ. ಈವರೆಗೆ ಹೆಚ್ಚಾಗಿ ರೌಡಿಸಂ, ಕೌಟುಂಬಿಕ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಶಿವರಾಜ್‌ಕುಮಾರ್ ಈ ಚಿತ್ರದಲ್ಲಿ ಸಂಪೂರ್ಣ ಪ್ರೇಮಿಯಾಗಿ, ಪ್ರೀತಿಯನ್ನಾಧರಿಸಿದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಘುರಾಂ ನಿರ್ದೇಶನದ ಈ ಚಿತ್ರ ವಿಶ್ವದ ಬೇರೆ ಬೇರೆ ತಾಣಗಳಲ್ಲಿ ಚಿತ್ರೀಕೃತವಾಗಲಿದೆ.ಈ ಚಿತ್ರದ ಬಗ್ಗೆ ಶಿವಣ್ಣ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಹಿಂದೆ ನಟಿಸಿದ ಎಲ್ಲ ಚಿತ್ರಗಳಿಗಿಂತ ಈ ಚಿತ್ರ ಭಿನ್ನ ಎನ್ನುತ್ತಾರೆ. ಇದು ಅಭಿಮಾನಿಗಳಿಗೆ ಮಾತ್ರವಲ್ಲ ಫ್ಯಾಮಿಲಿ ಪ್ರೇಕ್ಷಕರಿಗಾಗಿ ಮಾಡುವ ಚಿತ್ರ. ಈ ಚಿತ್ರ ತುಂಬಾ ಚೆನ್ನಾಗಿ ಮೂಡಿ ಬರಲಿದೆ ಎಂಬ ವಿಶ್ವಾಸವನ್ನು ಶಿವಣ್ಣ ವ್ಯಕ್ತಪಡಿಸುತ್ತಾರೆ. ಚಿತ್ರಕ್ಕಾಗಿ ಬ್ರೆಜಿಲ್, ಮೆಕ್ಸಕೋ, ಪೆರೂ, ಹಾಂಕಾಂಗ್, ಇಟಲಿ, ಚೈನಾ, ಆಗ್ರಾಗಳಲ್ಲಿ 25 ಕ್ಕೂ ಹೆಚ್ಚು ದಿನ ಚಿತ್ರೀಕರಣ ನಡೆಸಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಯಾರೂ ಮಾಡಿರದ ಹೊಸ ಪ್ರಯೋಗ ಮಾಡುತ್ತಿದ್ದೆವೆ. ಚಿತ್ರ ಬಾಲಿವುಡ್ ಮಟ್ಟಕ್ಕೆ ಮೂಡಿ ಬರಲಿದೆ. ಕನ್ನಡ ಚಿತ್ರವನ್ನು ಬೇರೆಯವರು ಕೂಡಾ ಬಂದು ನೋಡುವಂತಾಗಬೇಕು. ಚಿತ್ರದಲ್ಲಿ ಶಿವಣ್ಣ ಟ್ರಾವೆಲ್ ಗೈಡ್‌ನ ಪಾತ್ರ ಮಾಡಲಿದ್ದಾರೆ. ಮಾತು ನಡೆ-ನುಡಿ, ಪ್ರವಾಸಿಗರನ್ನು ಸತ್ಕರಿಸುವ ಬಗೆ ಹೀಗೆ ಅನೇಕ ವಿಷಯವನ್ನು ಶಿವಣ್ಣ ಅಭ್ಯಾಸಿಸಿದ್ದಾರೆ. ಚೆನ್ನೈನಲ್ಲಿ ಟ್ರಾವೆಲರ್ಸ್ ಗೈಡ್ ಸಂಸ್ಥೆಗೆ ಭೇಟಿ ನೀಡಿ ಅಲ್ಲಿನ ಗೈಡ್‌ಗಳು ಯಾವ ರೀತಿ ವರ್ತಿಸುತ್ತಾರೆ ಎಂಬುದನ್ನು ನೋಡಿದ್ದಾರಂತೆ. ಚಿತ್ರದಲ್ಲಿ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡನ್ನು ಯಥಾವತ್ತಾಗಿ ಅಳವಡಿಸುವ ಜೊತಗೆ ರಾಜ್ ಗೆಟಪ್‌ನಲ್ಲಿ ಶಿವಣ್ಣ ಕಂಗೊಳಿಸಿದ್ದಾರಂತೆ. ಈ ಹಾಡನ್ನು ವಿದೇಶದಲ್ಲಿ ಚಿತ್ರೀಕರಿಸಲಾಗುತ್ತದೆ.ಇಲ್ಲಿ ಹೀರೋಹಿಸಂ ಎದ್ದು ಕಾಣುವುದಿಲ್ಲವಂತೆ. ಬದಲಾಗಿ ಎಲ್ಲರಿಗೂ ಇಷ್ಟವಾಗುವ ಗೈಡ್ ಆಗಿ ಕಾಣಿಸಿಕೊಳ್ಳಿದ್ದಾರೆ. ಚಿತ್ರದಲ್ಲಿ ಶಿವಣ್ಣ ಹಾಡೊಂದನ್ನು ಕೂಡ ಹಾಡಲಿದ್ದಾರೆ. ಚಿತ್ರದ ಬಜೆಟ್ 10 ಕೋಟಿ ರೂ. ದಾಟುತ್ತದೆ.