ಪರಭಾಷಾ ನಟಿಯಾಗಿ ಕನ್ನಡದಲ್ಲಿ ಸ್ಥಾನ ಭದ್ರ ಪಡಿಸಿಕೊಂಡ ನಟಿಯೆಂದರೆ ಪೂಜಾ ಗಾಂಧಿ. ಈಗ ಅವರ ಸಾಲಿಗೆ ಮತ್ತಿಬ್ಬರು ಸೇರ್ಪಡೆಯಾಗುತ್ತಿದ್ದಾರೆ. ಒಬ್ಬಾಕೆ ನಿಖಿತಾ. ಇನ್ನೊಬ್ಬಾಕೆ ಬಿಯಾಂಕಾ ದೇಸಾಯಿ. ಮಹಾರಾಜ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಹೊಡೆದ ನಿಖಿತಾಗೆ ನಂತರ ರಾಜಕುಮಾರಿ, ವಂಶಿ, ದುಬೈ ಬಾಬು ಚಿತ್ರಗಳಲ್ಲಿ ಅವಕಾಶ ಸಿಕ್ಕಿತು.
ಈಗ ಬಿಯಾಂಕಾ ದೇಸಾಯಿ ಕೂಡಾ ಇದೇ ಹಾದಿಯಲ್ಲಿದ್ದಾರೆ. ಪ್ರಶಾಂತ್ ನಾಯಕರಾಗಿರುವ ಎಸ್. ನಾರಾಯಣ್ ನಿರ್ದೇಶನದ ಹೊಸ ಚಿತ್ರಕ್ಕೂ ಈಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದು ಈಕೆಗೆ ನಾಲ್ಕನೇ ಚಿತ್ರ. ಈ ಹಿಂದಿನ ಗುಲಾಮ, ರಾಕಿ ಹಾಗೂ ಯೋಗಿ ಚಿತ್ರಗಳು ಇನ್ನಷ್ಟೇ ತೆರೆ ಕಾಣಬೇಕಿದೆ.
ಕೆಲವು ಪರಭಾಷಾ ನಟಿಯರು ಅಭಿನಯದಿಂದ ಸ್ಥಾನ ಗಿಟ್ಟಿಸಿದ್ದರೆ, ಇನ್ನು ಕೆಲವರು ತಮ್ಮ ಮೈ ಮಾಟದಿಂದ ಸ್ಥಾನ ಪಡೆಯುತ್ತಿದ್ದಾರೆ. ಪೂಜಾ ಗಾಂಧಿ ಈಗ ಕನ್ನಡ ಕಲಿತು ಕನ್ನಡದವರೇ ಆಗಿ ಹೋಗಿದ್ದಾರೆ. ಯಾವುದಕ್ಕೂ ಬಿಯಾಂಕಾ ಬಿನ್ನಾಣ ಚಿತ್ರ ಬಿಡುಗಡೆಯಾದ ಬಳಿಕ ತಿಳಿಯಲಿದೆ.