ನಿರ್ದೇಶಕ ಮಹೇಶ್ ಬಾಬು ಈಗ ಸದ್ದಿಲ್ಲದೇ ಮತ್ತೊಂದು ಚಿತ್ರದ ಮಹೂರ್ತ ಮುಗಿಸಿದ್ದಾರೆ. ಅದು ದರ್ಶನ್ ನಾಯಕರಾಗಿರುವ 'ಅಭಯ್'. ಇದು ಪಕ್ಕಾ ಆಕ್ಷನ್ ಹಾಗೂ ಕಾಮಿಡಿ ಚಿತ್ರ. ಚಿತ್ರಕ್ಕೆ ನಾಯಕಿ ಇನ್ನೂ ಸಿಕ್ಕಿಲ್ಲ.
ಚಿತ್ರಕ್ಕೆ ಜನಾರ್ದನ ಮಹರ್ಷಿ ಕತೆ ಬರೆದಿದ್ದಾರೆ. ಹರಿಕೃಷ್ಣ ಸಂಗೀತವಿದ್ದು, ರಮೇಶ್ ಬಾಬು ಅವರ ಛಾಯಾಗ್ರಹಣವಿದೆ. ಹುಡುಗಾಟದ ಬಾಬು ರೆಡ್ಡಿ ಚಿತ್ರದ ನಿರ್ಮಾಪಕರು. ಶುಕ್ರವಾರ ಶುಭ ದಿನವಾದ್ದರಿಂದ ಹೆಚ್ಚು ಜನರಿಗೆ ಹೇಳದೆ ಮಹೂರ್ತ ಮಾಡಿದೆ ಎಂದರು ಮಹೇಶ್ ಬಾಬು.
ಅಂದ ಹಾಗೆ ಇನ್ನೂ ಮುಂದೆ ಮಹೇಶ್ ಬಾಬು ಅವರೇ ಚಿತ್ರಕಥೆ ಬರೆಯುತ್ತಾರಂತೆ. ಅವರ ತಲೆಯಲ್ಲಿ ನೂರಾರು ಕಥೆಗಳಿವೆಯಂತೆ. ಆದರೆ ಅದು ಚಿತ್ರವಾದರೆ ಜನ ಒಪ್ಪುತ್ತಾರೋ ಇಲ್ಲವೋ ಎಂಬ ಭಯದಿಂದ ಅವರ ಕಥೆಗಳನ್ನು ಚಿತ್ರ ಮಾಡುವ ಧೈರ್ಯ ಮಾಡಿಲ್ಲವಂತೆ.
ಕಳೆದ ಶುಕ್ರವಾರ ಬಿಡುಗಡೆಯಾದ ಇವರ ನಿರ್ದೇಶನದ 'ಪರಮೇಶ ಪಾನ್ವಾಲಾ' ಚಿತ್ರವನ್ನು ಜನ ಇಷ್ಟಪಡಲಿಲ್ಲ. ಆ ಚಿತ್ರಕ್ಕೂ ಜನಾರ್ದನ ಮಹರ್ಷಿ ಕಥೆ ಬರೆದಿದ್ದರು.