ಅಪ್ಪ-ಮಗನ 'ಉಯ್ಯಾಲೆ'

ಶನಿವಾರ, 13 ಡಿಸೆಂಬರ್ 2008( 17:04 IST )
ರೌಡಿಸಂ, ಲವ್ ಸ್ಟೋರಿ, ಚಿತ್ರಗಳೇ ಬರುತ್ತಿರುವ ಈ ಸಮಯದಲ್ಲಿ ಅಪ್ಪ-ಮಗನ ಕುರಿತ ಚಿತ್ರವೊಂದು ಸೆಟ್ಟೇರಿದೆ. ಆ ಚಿತ್ರದ ಹೆಸರು ಉಯ್ಯಾಲೆ. ಇತ್ತೀಚೆಗೆ ಬರುತ್ತಿರುವ ಕಮರ್ಷಿಯಲ್ ಚಿತ್ರಗಳಿಗಿಂತ ಭಿನ್ನ ಚಿತ್ರ ಮಾಡಬೇಕೆಂಬ ಉದ್ದೇಶದಿಂದ ಈ ಚಿತ್ರ ಮಾಡುತ್ತಿದ್ದೇನೆ ಎಂದರು ನಿರ್ದೇಶಕ ದಿನೇಶ್.
ಎಲ್ಲರೂ ಹೊಸದಾಗಿ ಸಿನಿಮಾ ಮಾಡುವಾಗ ಇಂದಿನ ಟ್ರೆಂಡ್ ಹೇಗಿದೆ ಎಂದು ತಿಳಿದು ಮಾಡುತ್ತಾರೆ. ಆದರೆ ನಾನು ಎಲ್ಲರಿಗಿಂತ ಭಿನ್ನವಾಗಿರಬೇಕೆಂದು ಕಲಾತ್ಮಕ ಶೈಲಿಯಲ್ಲಿ ಸಿನಿಮಾ ಮಾಡುತ್ತಿದ್ದೇನೆ. ಆದರೆ ಚಿತ್ರ ಎಲ್ಲೂ ಬೋರ್ ಹೊಡೆಸುವುದಿಲ್ಲ. ಅನಾವಶ್ಯಕವಾಗಿ ಕ್ಯಾಮರಾ ಸುತ್ತಿಸಿಲ್ಲ. ಚಿತ್ರ ತುಂಬಾ ಭಾವನೆಗಳಿರುತ್ತವೆ ಎಂದರು.
ಚಿತ್ರದಲ್ಲಿ ಎರಡು ಹಳ್ಳಿಗಳು ತುಂಬಾ ಮುಖ್ಯ ಪಾತ್ರ ವಹಿಸಲಿವೆಯಂತೆ. ಹಳ್ಳಿಯೊಂದು 10 ವರ್ಷ ನಂತರ ಹೇಗೆ ಕಾಣಿಸುತ್ತದೆ ಎಂಬುದನ್ನು ತೋರಿಸುತ್ತಿದ್ದೇವೆ. ಸಾಫ್ಟ್ ಸಿನಿಮಾ ಅಂದರೆ ಸಖತ್ ಫಿಲ್ ಇರುವ ಸಿನಿಮಾ ಎನ್ನುತ್ತಾರೆ ದಿನೇಶ್. ಹೈದರಾಬಾದ್, ಕೇರಳ ಮತ್ತು ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ.
ಪ್ರಭು ನಾಯಕನಾಗಿ, ಶಿಲ್ಪಾ ನಾಯಕಿಯಾಗಿ ನಟಿಸಿದ್ದಾರೆ. ರಮೇಶ್ ಭಟ್ ಅಪ್ಪನ ಪಾತ್ರದಲ್ಲಿ ನಟಿಸಿದ್ದಾರೆ. ಜನವರಿ ಹೊತ್ತಿಗೆ ಚಿತ್ರ ಬಿಡುಗಡೆಯಾಗಲಿದೆ.