ಒಬ್ಬ ವ್ಯಕ್ತಿಗೆ ಪ್ರಬುದ್ಧತೆ ಎಂಬುದು ಮೈಗೂಡಿಕೊಂಡರೆ ಆತ ತಾನೇ ದೊಡ್ಡವನೆಂದು ಭಾವಿಸುವುದಿಲ್ಲ. ತನ್ನ ಸಹವರ್ತಿಗಳನ್ನು ಪ್ರೋತ್ಸಾಹಿಸುತ್ತಾನೆ. ಈ ಎಲ್ಲ ಗುಣ ಮೈಗೂಡಿಕೊಂಡ ವ್ಯಕ್ತಿ ಎಂದರೆ ಸಾಹಿತಿ ಜಯಂತ್ ಕಾಯ್ಕಿಣಿ. ಅವರು ತುಂಬಿದ ಕೊಡದಂತೆ. ಅದ್ಯಾವತ್ತೂ ತುಳುಕುವುದಿಲ್ಲ. ಇವರ ಈ ಗುಣಕ್ಕೆ ಇತ್ತೀಚೆಗೆ ನಿದರ್ಶನವಾದುದು ಬಿರುಗಾಳಿ ಚಿತ್ರದ ಪತ್ರಿಕಾಗೋಷ್ಠಿ.
ನಿರ್ದೇಶಕ ಹರ್ಷ ಮಾತು ಆರಂಭಿಸಿ, ಜಯಂತ್ ಹಾಡು ಬರೆದಿದ್ದಾರೆ. ಅದು ಎಷ್ಟು ಸುಂದರವಾಗಿದೆ ಎಂಬುದನ್ನು ನನ್ನ ಬಾಯಿಂದ ಹೇಳಲಾಗುತ್ತಿಲ್ಲ. ಇದು ಇನ್ನೊಂದು ಮುಂಗಾರು ಮಳೆ ಆಗಲಿದೆ. ಜಯಂತ್ ನನಗೋಸ್ಕರ ಬರೆದಿದ್ದಾರೆ. ಅರ್ಜುನ್ ಸಂಗೀತ ಅವರ ಕಲ್ಪನೆಗೆ ತಾಳ ಹಾಕುತ್ತವೆ ಎಂದು ಪುಂಖಾನುಪುಂಖವಾಗಿ ಕಾಯ್ಕಿಣಿ ಬಗ್ಗೆ ಹೇಳಿ ಮುಗಿಸಿದರು.
ನಂತರ ಮೈಕ್ ಪಡೆದ ಕಾಯ್ಕಿಣಿ, ನಾನು ಬರೆದಿರುವುದು ಬರೀ ಎರಡು ಹಾಡು. ಉಳಿದದ್ದು ಕವಿರಾಜ್, ಮಹೇಶ್ ಕುಮಾರ್ ಮುಂತಾದವರು ಬರೆದಿದ್ದಾರೆ. ಕವಿರಾಜ್ ನನ್ನ ಹಾಡುಗಳಿಗೆ ಸರಿದೂಗುವ ಥರದಲ್ಲಿ ಹಾಡು ಬರೆದಿದ್ದಾರೆ. ಒಂದು ಚಿತ್ರಕ್ಕೆ ಎಲ್ಲರ ಶ್ರಮ ಹೇಗೆ ಅನಿವಾರ್ಯವೋ ಅದೇ ರೀತಿ ಸಾಹಿತ್ಯ ಕೂಡಾ. ನಾನು ಬರೆದ ಹಾಡುಗಳು ಒಂದು ವರ್ಗಕ್ಕೆ ಇಷ್ಟವಾದರೆ, ಕವಿರಾಜ್ ಹಾಡುಗಳು ಮತ್ತೊಂದು ವರ್ಗಕ್ಕೆ ಇಷ್ಟವಾಗುತ್ತವೆ. ಬರೀ ನನ್ನ ಹೆಸರು ಹೇಳುವುದು ಅಷ್ಟು ಸರಿಯಲ್ಲ. ಎಲ್ಲರಿಗೂ ಒಳ್ಳೆಯದಾಗಲಿ. ಚಿತ್ರ ಹಿಟ್ ಆಗಲಿ ಎಂದರು.
ಇದು ಒಬ್ಬ ಮನುಷ್ಯನ ದೊಡ್ಡಗುಣ ಹಾಗೂ ತನ್ನ ಸಹವರ್ತಿಯ ಬೆನ್ನು ತಟ್ಟುವ ಪರಿಯನ್ನು ತೋರಿಸುತ್ತದೆ. ಕಾಯ್ಕಿಣಿ ಈಗಾಗಲೇ 110 ಸಿನಿಮಾಗಳಿಗೆ ಹಾಡು ಬರೆದಿದ್ದಾರೆ.