ಮಿಥುನ್ ತೇಜಸ್ವಿ ಮತ್ತು ಪಾಯಲ್ ಘೋಷ್ ಮುಖ್ಯಭೂಮಿಕೆಯಲ್ಲಿರುವ ವರ್ಷಧಾರೆ ಚಿತ್ರಕ್ಕೀಗ ಶೇ 80 ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಈಗಾಗಲೇ ಎರಡು ಹಾಡುಗಳನ್ನು ಚಿತ್ರಿಸಲಾಗಿದ್ದು, ಇನ್ನುಳಿದ ನಾಲ್ಕು ಹಾಡುಗಳ ಚಿತ್ರೀಕರಣ ಸದ್ಯದಲ್ಲಿಯೇ ಆರಂಭವಾಗಲಿದೆ. ಇದೊಂದು ವಿಶಿಷ್ಟ ಪ್ರೇಮಕಥೆಯ ಭಿನ್ನ ನಿರೂಪಣೆಯ ಚಿತ್ರ ಎಂದಷ್ಟೇ ಹೇಳಿದರು ನಿರ್ದೇಶಕ ವೇಮಗಲ್ ಜಗನ್ನಾಥ್.
ಚಿತ್ರದಲ್ಲಿ ವಾಲೈಂಟೈನ್ ಡೇ ಇತಿಹಾಸ ಹೇಳುವ ಹಾಡೊಂದನ್ನು ಚಿತ್ರಿಸಲಾಗುತ್ತಿದೆ. ಕವಿ ಡಾ.ಎಚ್.ಎಸ್. ವೆಂಕಟೇಶ್‌ಮೂರ್ತಿ ಈ ಗೀತೆಯನ್ನು ರಚಿಸಿದ್ದು, ಅದ್ದೂರಿ ಸೆಟ್‌ನಲ್ಲಿ ಈ ಹಾಡನ್ನು ಚಿತ್ರಿಸಲಾಗುತ್ತದೆ. ಚಿತ್ರದ ಆರು ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸುತ್ತಿದ್ದಾರೆ. ಥ್ರಿಲ್ಲರ್ ಮಂಜು ಸಾಹಸ ಸಂಯೋಜಿಸಿದ್ದಾರೆ.
ಮಿಥುನ್ ಈ ಚಿತ್ರದ ಮೂಲಕ ಯಶಸ್ಸಿನ ನೀರೀಕ್ಷೆಯಲ್ಲಿದ್ದಾರೆ. ಈ ಹಿಂದೆ ತೆರೆಕಂಡ ಆಕಾಶಗಂಗೆ ಚಿತ್ರ ಅವರಿಗೆ ಯಶಸ್ಸು ನೀಡಲಿಲ್ಲ. ಮುಂಬೈ ಹುಡುಗಿ ಪಾಯಲ್ ಈಗ ಬೇರೆ ಬೇರೆ ಚಿತ್ರಗಳಲ್ಲಿ ಬ್ಯುಸಿಯಾಗಿ ಬಿಟ್ಟಿದ್ದಾರೆ. ಫೆಬ್ರವರಿ 14 ರಂದು ಚಿತ್ರ ತೆರೆ ಕಾಣಲಿದೆ.