ವಿಜಯ್ ಹಾಗೂ ಶುಭಾ ಪೂಂಜಾ ನಟಿಸುತ್ತಿರುವ ತಾಕತ್ ಚಿತ್ರತಂಡ ಸದ್ಯ ಮೈಸೂರಿನಲ್ಲಿ ಬೀಡು ಬಿಟ್ಟಿದೆ. ನಿರ್ದೇಶಕ ಎಂ.ಎಸ್. ರಮೆಶ್ ಹಾಡಿನ ಚಿತ್ರೀಕರಣವನ್ನು ಮೈಸೂರಿನಲ್ಲಿ ನಡೆಸುತ್ತಿದ್ದಾರೆ. ಇದೊಂದು ವಿಶಿಷ್ಟ ಹಾಡು. ಈ ಹಾಡಿನಲ್ಲಿ 12 ಪ್ರಮುಖ ಪಾತ್ರಗಳು ಬಂದು ಹೋಗುತ್ತವೆ. ಈ ಪಾತ್ರಗಳು ನಾಯಕನಿಗೆ ಬದುಕಿನ ಬಗ್ಗೆ ಹೇಳುತ್ತವೆ. ಹೃದಯ ಶಿವ ಇದಕ್ಕೆ ವಿಶಿಷ್ಟ ಹಾಡು ಬರೆದಿದ್ದಾರೆ ಎಂದರು ರಮೇಶ್.
ಎಂ.ಎಸ್. ರಮೇಶ್ ತಮ್ಮ 24 ಫ್ರೇಮ್ಸ್ ಬ್ಯಾನರ್‌ನಡಿ ತಾಕತ್ ಚಿತ್ರ ನಿರ್ಮಿಸುತ್ತಿದ್ದಾರೆ. ವಿಜಯ್ ರಾಘವೇಂದ್ರ ನಾಯಕರಾಗಿದ್ದ ಬೆಳದಿಂಗಳಾಗಿ ಬಾ ಅವರ ಸಂಸ್ಥೆಯ ಮೊದಲ ಚಿತ್ರ. ಆ ಚಿತ್ರದಲ್ಲಿ ನಟಿಸಿದ್ದ ಕವಿ ಚಂದ್ರಶೇಖರ್ ಕಂಬಾರರು ತಾಕತ್ ಚಿತ್ರದಲ್ಲಿಯೂ ಅಭಿನಯಿಸಲಿದ್ದಾರೆ ಎನ್ನುವ ಸುದ್ದಿಯಿದೆ. ಈ ಬಗ್ಗೆ ಈಗಲೇ ಏನು ಹೇಳುವುದಿಲ್ಲ ಎನ್ನುತ್ತಾರೆ ರಮೇಶ್.
ಚಿತ್ರದಲ್ಲಿ ವಿಜಯ್ ಬಸ್ ಕ್ಲೀನರ್ ಪಾತ್ರ ಮಾಡುತ್ತಿದ್ದಾರೆ. ಇದು ಕೂಡಾ ದುನಿಯಾ ಚಿತ್ರದಂತೆ ವಿಶೇಷವಾದ ಚಿತ್ರವಾಗಲಿದೆ ಎಂಬುದು ಚಿತ್ರತಂಡದ ಅಭಿಪ್ರಾಯ. ಈಗಾಗಲೇ ಚಿತ್ರಕ್ಕೆ 15 ದಿನಗಳ ಚಿತ್ರೀಕರಣ ನಡೆಸಿದ್ದು, ಶೆ 30ರಷ್ಟು ಚಿತ್ರೀಕರಣ ಮುಗಿದಂತಾಗಿದೆ. ಚಂಡ ಮತ್ತು ಸ್ಲಂ ಬಾಲ ನಂತರ ತಾಕತ್‌ನಲ್ಲಿ ಮತ್ತೊಮ್ಮೆ ವಿಜಯ್-ಶುಭಾ ಪೂಂಜಾ ಜೊತೆಯಾಗಿ ನಟಿಸುತ್ತಿದ್ದಾರೆ.