'ಸರ್ಕಸ್' ಚಿತ್ರ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿದೆ. ಈ ನಡುವೆ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭವೂ ಇತ್ತೀಚೆಗೆ ನಗರದ ಕ್ಯಾಪಿಟಲ್ ಹೊಟೇಲ್‌ನಲ್ಲಿ ನಡೆಯಿತು. ಪುನೀತ್ ರಾಜ್ಕುಮಾರ್, ರಾಕ್ಲೈನ್ ವೆಂಕಟೇಶ್, ಯೋಗರಾಜ್ ಭಟ್, ನಾಯಕ ಗಣೇಶ್, ನಾಯಕಿ ಅರ್ಚನಾ ಭಾಗವಹಿಸಿದ್ದರು.
ಈ ಚಿತ್ರದಲ್ಲಿ ನಿರ್ಮಾಪಕ-ನಿರ್ದೇಶಕ ದಯಾಳ್ ಒಂದು ಪಾತ್ರ ಮಾಡಿದ್ದಾರೆ. ಅದು ರೈಲಿನಲ್ಲಿ ಭಿಕ್ಷೆ ಬೇಡುವ ಭಿಕ್ಷುಕನ ಪಾತ್ರ. ಈ ಹಿಂದೆ ಇವರು ಗಾಳಿಪಟ ಚಿತ್ರದಲ್ಲಿ ಡ್ರಾಕುಲಾನ ಪಾತ್ರದಲ್ಲಿ ನಟಿಸಿದ್ದರು. ಆದರೆ ಅದು ಮೂಗನ ಪಾತ್ರವಾದ್ದರಿಂದ ಅಲ್ಲಿ ಅಭಿನಯಕ್ಕೆ ಅವಕಾಶವಿತ್ತೆ ಹೊರತು ಮಾತಿಗೆ ಅವಕಾಶವಿರಲಿಲ್ಲ. ಆದರೆ ಸರ್ಕಸ್ ಚಿತ್ರದ ಭಿಕ್ಷುಕನ ಪಾತ್ರದಲ್ಲಿ ಎರಡಕ್ಕೂ ಅವಕಾಶವಿದೆ ಎಂದರು ದಯಾಳ್.
ದಯಾಳ್ ಚಿತ್ರವನ್ನು ಜನವರಿ 15 ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಕ್ಯಾಸೆಟ್ ಬಿಡುಗಡೆ ಸಂದರ್ಭದಲ್ಲಿ ಚಿತ್ರಕ್ಕೆ ದುಡಿದ ತಂತ್ರಜ್ಞರನ್ನು ದಯಾಳ್ ವೇದಿಕೆಗೆ ಕರೆದು ಸನ್ಮಾನಿಸಿದರು. ತಮ್ಮ ಹತ್ತು ವರ್ಷದ ಸಿನಿಮಾ ಕನಸಿಗೆ ಇಂದು ಹೊಸ ಅರ್ಥ ಬಂದಿದೆ. ಹಾಡುಗಳು ಚೆನ್ನಾಗಿ ಮೂಡಿ ಬಂದಿದೆ. ಎಲ್ಲ ಕಾಲದಲ್ಲೂ ಸಹಕರಿಸಿದವರಿಗೆ ನಾನು ಚಿರಋಣಿ ಎಂದರು ದಯಾಳ್.