ಕರಾವಳಿ ಹುಡುಗಿಯಾಗಿ ನೀತು

ನಿರ್ದೇಶಕ ಕೋಡ್ಲು ರಾಮಕೃಷ್ಣ ಕಲಾತ್ಮಕ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಬಿಳಿಮನೆ ರಾಮದಾಸ್ ಅವರ ಕರಾವಳಿ ಹುಡುಗಿ ಕೃತಿಯನ್ನಾಧರಿಸಿ ಅದೇ ಶಿರ್ಷಿಕೆಯಡಿ ಕೋಡ್ಲು ಚಿತ್ರ ಮಾಡುತ್ತಿದ್ದಾರೆ. ಕಲಾತ್ಮಕ ಚಿತ್ರವಾದ್ದರಿಂದ ಮುಂದಿನ ದಿನಗಳಲ್ಲಿ ಚಿತ್ರದ ಟೈಟಲ್ ಬದಲಾಗುವ ಸಾಧ್ಯತೆಗಳಿವೆ.ಚಿತ್ರದಲ್ಲಿ ನೀತು ನಟಿಸುತ್ತಿದ್ದು, ಇದೇ ತಿಂಗಳ ಕೊನೆಗೆ ಚಿತ್ರೀಕರಣ ಆರಂಭವಾಗುತ್ತದೆ. ಎಸ್.ರಾಮಚಂದ್ರ ಕ್ಯಾಮರಾ ಹಿಡಿಯುತ್ತಿದ್ದು, ವಿ.ಮನೋಹರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಶೋಷಣೆಗೊಳಗಾಗುವ ಕೆಳಜಾತಿಯ ಯುವತಿ, ಎಲ್ಲಾ ಕಿರುಕುಳ ಎದುರಿಸಿ ಹೇಗೆ ಸಾಧನೆಯ ಹಾದಿಯಲ್ಲಿ ಸಾಗುತ್ತಾಳೆ ಎನ್ನುವ ಕಥಾವಸ್ತು ಚಿತ್ರದಲ್ಲಿರುತ್ತದೆ. ಕಲಾತ್ಮಕ ಚಿತ್ರದ ನಂತರ ಕೋಡ್ಲು ವ್ಯಾಪಾರಿ ಚಿತ್ರವೊಂದನ್ನು ಕೈಗೆತ್ತಿಕೊಳ್ಳಲಿದ್ದಾರೆ. ಆ ಚಿತ್ರ ಏಪ್ರಿಲ್ ವೇಳೆ ಸೆಟ್ಟೇರುವ ಸಾಧ್ಯತೆಗಳಿವೆ. ತ್ರಿಕೋನ ಪ್ರೇಮಕಥೆಯ ಚಿತ್ರದಲ್ಲಿ ನಾಯಕಿಯಾಗಿ ನೀತು ನಟಿಸುವುದು ಖಾತ್ರಿಯಾಗಿದೆ. ದಿಗಂತ್ ಮತ್ತು ತಿಲಕ್ ಇಬ್ಬರು ನಾಯಕರು. ಗುರುಕಿರಣ್ ಸಂಗೀತ ನೀಡಲಿದ್ದಾರೆ.