ಒಂದು ಸಮಯದಲ್ಲಿ ತಮ್ಮ ಅದ್ಬುತ ನಟನೆಯ ಮೂಲಕ ಗಾಂಧಿನಗರದಲ್ಲಿ ಬೇಡಿಕೆಯ ನಟನಾಗಿದ್ದ ಚರಣ್‌ರಾಜ್ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಿಂದ ದೂರವಾದರು. ಕನ್ನಡದಲ್ಲಿ ಅವರು ನಟಿಸಿದ ಕೊನೆಯ ಚಿತ್ರ ಸುದೀಪ್ ನಾಯಕರಾಗಿದ್ದ ತಿರುಪತಿ. ಆ ನಂತರ ಅನೇಕ ಆಫರ್‌ಗಳು ಬಂದರೂ ಇವರು ಒಪ್ಪಿಕೊಳ್ಳಲಿಲ್ಲ. ಈಗ ತಮ್ಮ ಸ್ವಂತ ನಿರ್ಮಾಣದ ಚಿತ್ರದ ಮೂಲಕ ತಾಯ್ನಾಡಿನಲ್ಲಿ ಮತ್ತೊಂದು ಇನ್ನಿಂಗ್ಸ್ ಆರಂಭಿಸುವ ಯೋಜನೆ ಹೆಣೆಯುತ್ತಿದ್ದಾರೆ.
ಅನೇಕ ಆಫರ್‌ಗಳು ಬಂದರೂ ನಾನು ಒಪ್ಪಿಕೊಳ್ಳಲಿಲ್ಲ. ಮೊದಲಿನಿಂದಲೂ ನಾನು ಪಾತ್ರಗಳ ಆಯ್ಕೆಯಲ್ಲಿ ತುಂಬಾ ಎಚ್ಚರಿಕೆ ವಹಿಸಿದ್ದೇನೆ. ತಮಿಳು ಹಾಗೂ ತೆಲುಗಿನಲ್ಲಿ ಸಾಕಷ್ಟು ಅವಕಾಶಗಳಿದ್ದವು. ಮುಂದಿನ ವರ್ಷ ಕನ್ನಡ ಚಿತ್ರ ಮಾಡಲಿದ್ದೇನೆ ಎಂದರು ಚರಣ್‌ರಾಜ್.
ಚರಣ್‌ರಾಜ್ ಈಗ ನಿರ್ಮಾಪಕ ಹಾಗೂ ನಿರ್ದೇಶಕರೂ ಹೌದು. ಅವರ ನಿರ್ಮಾಣ ನಿರ್ದೇಶನದ ಮೂರನೇ ಚಿತ್ರ ಕಾಸಿವೇಡ್ ಸದ್ಯದಲ್ಲಿಯೇ ಸೆಟ್ಟೇರಲಿದೆಯಂತೆ. ತಮಿಳು ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ತಯಾರಾಗಲಿದೆ. ಬಹುಕೋಟಿ ಬಜೆಟ್‌ನ ಈ ಚಿತ್ರದಲ್ಲಿ ತಮಿಳು ಹಾಗೂ ತೆಲುಗಿನ ಮುಂಚೂಣಿ ನಟರು ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಸ್ವತಃ ಚರಣ್‌ರಾಜ್ ಅವರೇ ಸಂಗೀತ ಸಂಯೋಜಿಸುತ್ತಿದ್ದಾರೆ. ಇವರಿಗೆ ಹಿಂದೆರ ಆರ್ಕೆಸ್ಟ್ರಾಗಳಲ್ಲಿ ಡ್ರಮ್, ಗಿಟಾರ್ ನುಡಿಸಿದ ಅನುಭವವೂ ಇದೆಯಂತೆ.