ಇದುವರೆಗೆ ಪ್ರೇಕ್ಷಕರನ್ನು ನಗಿಸುವಲ್ಲಿ ಎತ್ತಿದ ಕೈ ಆಗಿದ್ದ ಸಿಹಿ ಕಹಿ ಚಂದ್ರು ಇದೀಗ ಪ್ರೇಕ್ಷಕರನ್ನು ಕಣ್ಣೀರು ಹಾಕಿಸುತ್ತಿದ್ದಾರೆ. ಇದುವರೆಗೆ ಜನ ನಗ್ತಿದ್ರು, ಆದ್ರೆ ನಾವು ಆಳ್ತಿದ್ವಿ. ಇನ್ಮುಂದೆ ನಾವು ನಗ್ತೀವಿ, ಜನ ಆಳ್ತಾರೆ ಎಂದು ಮಾತನಾಡಿದರು ಸಿಹಿಕಹಿ ಚಂದ್ರು.
ಇದೆಲ್ಲಾ ಹೇಳಿದ್ದು, ‘ಬದುಕು ಮಾಯೆಯ ಆಟ’ ಎಂಬ ಹೊಸ ಧಾರವಾಹಿ ಬಗ್ಗೆ. ಸಿಹಿಕಹಿ ಚಂದ್ರು ಇದನ್ನು ಕೈಗೆತ್ತಿಕೊಂಡಿದ್ದಾರೆ. ಇದೇ ತಿಂಗಳ 22ರಂದು ಪ್ರಸಾರಗೊಳ್ಳಲಿದೆ. ಕಾಮಿಡಿ ಮಾಡುವುದ ಕಷ್ಟ. ಕಾಮಿಡಿ ಸೀರಿಯಲ್ ಮಾಡುವುದು ಇನ್ನು ಕಷ್ಟ. ಪ್ರತಿ ದೃಶ್ಯಕ್ಕೂ ಹಾಸ್ಯ ಬೇಕು. ಅದಕ್ಕಾಗಿ ಹುಡುಕಾಡಬೇಕು. ಹೆಚ್ಚಾದರೆ ಕತ್ತರಿ ಹಾಕಬೇಕು. ಹಾಗೆ ಮಾಡುವಾಗ ಕೆಲ ಬಾರಿ ಕಣ್ಣಲ್ಲಿ ನೀರು ಬರುತ್ತಿತ್ತು. ಆದರೆ ಪ್ರೇಕ್ಷಕನಿಗೆ ಇದು ಕಾಣಿಸದ ಕಾರಣ ಆತನ ನೋಡಿ ನಗುತ್ತಿದ್ದ ಅಷ್ಟೇ ಎನ್ನುತ್ತಾರೆ ಅವರು.
ಇಲ್ಲಿವರೆಗೆ ಪಾಪಾ ಪಾಂಡು, ಸಿಲ್ಲಿ ಲಲ್ಲಿ, ಯಾಕ್ಕಿಂಗ್ ಆಡ್ತಿರೋ, ಪಾಂಡು ಐ ಲವ್ ಯೂ ಗಳೆಲ್ಲಾ ಪ್ರೇಕ್ಷಕರನ್ನು ಯದ್ವಾ ತದ್ವಾ ನಗಿಸಿತ್ತು. ಇದರ ಮಧ್ಯೆ ಸಿಹಿಕಹಿ ಚಂದ್ರು ಅವರು ಸಮಾಕಾಲಿನ ಸಾಮಾಜಿಕ ಸಮಸ್ಯೆ ಕುರಿತ ಚಿರಸ್ಮರಣೆ ಮತ್ತು ಪರಮಪದಗಳಲ್ಲಿ ನಗುತ್ತಿದ್ದವರ ಕಣ್ಣನ್ನು ಸ್ವಲ್ಪ ಮಟ್ಟಿಗೆ ತೇವ ಮಾಡಿತ್ತು. ಇದೀಗ ಮತ್ತೊಂದು ಧಾರವಾಹಿ ಮೂಲಕ ಸೀರಿಯಸ್ ಆಗಿಯೇ ಪ್ರೇಕ್ಷಕರನ್ನು ಅಳಿಸಲು ಬದುಕು ಮಾಯೆಯ ಆಟ ಎಂಬುದನ್ನು ಕೈಗೆತ್ತಿಕೊಂಡಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನು ರಂಗನಾಥ ಪಾರ್ಥ ಹೊತ್ತುಕೊಂಡಿದ್ದಾರೆ.